ವಿಜಯಸಾಕ್ಷಿ ಸುದ್ದಿ, ಗದಗ : ನಮ್ಮ ಸುತ್ತಲಿನ ಪ್ರಕೃತಿ ಮತ್ತು ಪರಿಸರಗಳು ಮಾನವನ ಜೀವನವನ್ನು ನಿರ್ಧರಿಸುವ ಅಮೂಲ್ಯ ಸಂಪತ್ತು. ನಮ್ಮೆಲ್ಲರ ಪ್ರಾಣವಾಗಿರುವ ಪರಿಸರ ಇತ್ತೀಚೆಗೆ ಮನುಷ್ಯನ ಅತಿಯಾಸೆ, ಲೋಪಗಳಿಂದಾಗಿ ತೀವ್ರವಾದ ಹಾನಿಗೆ ಒಳಗಾಗುತ್ತಿದೆ. ಹೀಗಾಗಿ ಅಕಾಲದಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಭೂಕುಸಿತ, ಪ್ರವಾಹಗಳು ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿ ಬದುಕು ದಿನದಿಂದ ದಿನಕ್ಕೆ ಹದಗೆಡುತ್ತಿದೆ.
ಪಂಚಭೂತಗಳಿಂದಾದ ಈ ಮಾನವ ದೇಹ ಪಂಚಭೂತಗಳನ್ನು ಒಳಗೊಂಡ ಪ್ರಕೃತಿಯ ಮೇಲೆ ಸಂಪೂರ್ಣ ಅವಲಂಬಿತ. ಬದುಕು ನಿರ್ವಿಘ್ನವಾಗಿ ಸಾಗಬೇಕಾದರೆ ಪರಿಸರದ ಉಳಿವು ಅವಶ್ಯಕ ಎಂದು ಸ್ಟುಡೆಂಟ್ ಎಜುಕೇಶನ್ ಸಂಸ್ಥೆಯ ಚೇರಮನ್ ಪ್ರೋ. ರಾಜೇಶ ಕುಲಕರ್ಣಿ ಅಭಿಪ್ರಾಯಪಟ್ಟರು.
ನಗರದ ಸನ್ಮಾರ್ಗ ಕಾಲೇಜಿನಲ್ಲಿ ಜರುಗಿದ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾಥಿಗಳಿಂದ ವೃಕ್ಷಾರೋಪಣ ನೆರವೇರಿಸಿ ಪ್ರಾಚಾರ್ಯ ಪ್ರೇಮಾನಂದ ರೋಣದ ಮಾತನಾಡಿ, ಪ್ರಕೃತಿ-ಪರಿಸರ ಉಳಿದರೆ ಮಾತ್ರ ಮಾನವನ ಜೀವ ಸುರಕ್ಷಿತ. ಹೀಗಾಗಿ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯವಾಗಲಿ ಎಂದರು. ಸಂಸ್ಥೆಯ ಆಡಳಿತಾಧಿಕಾರಿ ಎಂ.ಸಿ. ಹಿರೇಮಠ ಹಾಗೂ ಪದಾಧಿಕಾರಿಗಳಾದ ಪ್ರೊ. ರೋಹಿತ ಒಡೆಯರ್, ಪ್ರೊ.ರಾಹುಲ ಒಡೆಯರ್, ಪ್ರೊ. ಸೈಯದ ಮತಿನ್ ಮುಲ್ಲಾ, ಪ್ರೊ. ಪುನೀತ ದೇಶಪಾಂಡೆ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಪ್ರೊ. ಪರಶುರಾಮ ಕೋಟ್ನಿಕಲ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ವಿಜಯ ಹೆಬಸೂರ ವಂದಿಸಿದರು.