ಸುವರ್ಣ ಮಹೋತ್ಸವದತ್ತ ಹೆಜ್ಜೆ

0
Establishment of yoga school
Spread the love

ನಮ್ಮ ನಾಡಿನ ಸಂಸ್ಕೃತಿ-ಪರಂಪರೆ-ಇತಿಹಾಸ ಅವಲೋಕಿಸಿದಾಗ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮುಂತಾದ ಕ್ಷೇತ್ರಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಠಗಳಲ್ಲಿ ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಡಂಬಳ-ಗದಗ ಮಠವು ಗೌರವಾನ್ವಿತ ಸ್ಥಾನದಲ್ಲಿದೆ. ಶ್ರೀಮಠವು ತನ್ನ ಅಂಗ ಸಂಸ್ಥೆಗಳ ಮೂಲಕ ಅನೇಕ ಜನೋಪಯೋಗಿ ಸೇವಾಕಾರ್ಯಗಳನ್ನು ಮಾಡುತ್ತಿರುವುದು. ಇಂಥವುಗಳಲ್ಲಿ ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆಯು ವಿಶಿಷ್ಠ ಸಂಸ್ಥೆಯಾಗಿದೆ.

Advertisement

`ಇಂದು ನಮ್ಮ ನಾಡಿಗೆ ಬೇಕಾಗಿರುವುದು ಅಖಂಡ ಆತ್ಮವಿಶ್ವಾಸದ, ವೀರ್ಯವತ್ತಾದ ಆತ್ಮ ತೇಜೋಬಲದಿಂದ ತೊಳಗಿ ಬೆಳಗುವ ಕಬ್ಬಿಣ ಸ್ನಾಯುಗಳ, ಉಕ್ಕಿನ ನರಗಳ ಪುರುಷಸಿಂಹರು’ ಸ್ವಾಮಿ ವಿವೇಕಾನಂದರ ಆಶೆಯ ಮೇರೆಗೆ ನಮ್ಮ ದೇಶದ ಬೆನ್ನೆಲುಬಾದ ಯುವಶಕ್ತಿ ವಿಚ್ಛಿದ್ರಕಾರಕ ಕಾರ್ಯಗಳಲ್ಲಿ ತೊಡಗುತ್ತಿರುವುದನ್ನು ಮನಗಂಡು ಅವರನ್ನು ಸದೃಢ ಕಟ್ಟಾಳುಗಳನ್ನಾಗಿ ಮಾಡಿ ದೇಶಕ್ಕೆ ಅಮೃತ ಪುತ್ರರನ್ನು ಒದಗಿಸಬೇಕೆಂಬ ಸಂಕಲ್ಪದಿಂದ ತ್ರಿವಿಧ ದಾಸೋಹಿ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು ಸ್ಥಾಪಿಸಿದ ಯೋಗ ಪಾಠಶಾಲೆ ಸ್ಥಾಪನೆಯಾದಾಗಿನಿಂದ (1975) ಈವರೆಗೆ ಯೋಗ ಶಿಕ್ಷಣ ಪ್ರಸಾರ ಸೇವೆಯಲ್ಲಿ ತೊಡಗಿದೆ.

ಈ ನಿಟ್ಟಿನಲ್ಲಿ ಯೋಗ ಶಿಕ್ಷಣ ಪ್ರಸಾರ-ಪ್ರಚಾರ, ಯೋಗ ಶಿಬಿರ, ಪ್ರದರ್ಶನ ಹಮ್ಮಿಕೊಳ್ಳುವುದು, ಯೋಗಾಸನ ಸ್ಪರ್ಧೆ, ಉಪನ್ಯಾಸ, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಜನಗಳಲ್ಲಿ ಯೋಗದ ಬಗೆಗೆ ಅರಿವು ಮೂಡಿಸುವ ವಿದಾಯಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಸಾರ್ವಜನಿಕವಾಗಿ ಪ್ರತಿದಿನ ಮುಂಜಾನೆ 6ರಿಂದ 7.30ವರೆಗೆ ಹಾಗೂ ಸಾಯಂಕಾಲ 5ರಿಂದ 6ರವರೆಗೆ ತಪ್ಪದೇ ಯೋಗ ತರಬೇತಿ ವರ್ಗ ನಡೆಸುವುದು. ಬೇಸಿಗೆಯ ರಜೆಯಲ್ಲಿ ಶಾಲಾ ಮಕ್ಕಳಿಗಾಗಿ ಸಂಸ್ಕೃತಿ-ಸಂಸ್ಕಾರ ಶಿಬಿರ ಹಮ್ಮಿಕೊಂಡು ಅವರಿಗೆ ಯೋಗ, ನೀತಿ ಶಿಕ್ಷಣ, ಆಟೋಟ, ವಚನ ಗಾಯನ ಹೀಗೆ ರಚನಾತ್ಮಕವಾದ ಕಾರ್ಯಕ್ರಮಗಳಿಂದ ಮಕ್ಕಳು ಮಾನಸಿಕ-ದೈಹಿಕ ಬೆಳವಣಿಗೆಗೆ ಪೂರಕವಾಗುವಂತೆ, ಈ ಸಂಸ್ಥೆ ಕಳೆದ 20 ವರ್ಷಗಳಿಂದ ನಡೆಸುತ್ತಾ ಬಂದಿರುವುದು ಪಾಲಕರಲ್ಲಿ ಸಂತೋಷವನ್ನುಂಟುಮಾಡಿದೆ.

ಇಷ್ಟೇ ಅಲ್ಲದೇ, ಸಂಸ್ಥೆಯ ಅಡಿಯಲ್ಲಿ ಯೋಗ ಚಿಂತನ ಕೂಟ, ಬಸವ ಯೋಗಕೇಂದ್ರ ಹಾಗೂ ಅಕ್ಕಮಹಾದೇವಿ ಯೋಗವಿಜ್ಞಾನ ಕೇಂದ್ರ, ಶ್ರೀ ಕುಮಾರೇಶ್ವರ ಯೋಗ ಜಿಮ್ ಹೀಗೆ ಮೂರು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಯೋಗ ಚಿಂತನ ಕೂಟದ ಉದ್ದೇಶ ಆತ್ಮಕಲ್ಯಾಣ, ಸಮಾಜ ಕಲ್ಯಾಣದೊಂದಿಗೆ, ನಾಡು-ನುಡಿ ಹಾಗೂ ಆರೋಗ್ಯ ಜಾಗೃತಿ ಅಭಿಯಾನದ ಮೂಲಕ ಸಮಾಜಮುಖಿ ಸ್ವಾಸ್ಥ್ಯ ಕಾಪಾಡುವದಾಗಿದೆ. ಇನ್ನು ಬಸವ ಯೋಗ ಕೇಂದ್ರ ಸಿ.ವಾಯ್.ಎಸ್. ಯೋಗ ಸರ್ಟಿಫಿಕೇಟ್ ಕೋರ್ಸ್ ಹಾಗೂ ಪಿ.ಜಿ.ಡಿಪ್ಲೋಮಾ ಹೀಗೆ ಎರಡು ಕೋರ್ಸ್ಗಳನ್ನು ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆಸುತ್ತಾ ಬರುತ್ತಿದೆ.

ಈ ಕೋರ್ಸ್ಗಳನ್ನು ಪಡೆದ ಹಲವಾರು ಯುವಕರು, ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಸರಕಾರಿ ಇಲಾಖೆಗಳಲ್ಲಿ ಯೋಗ ಶಿಕ್ಷಕರಾಗಿ, ಯೋಗ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಈ ಸಂಸ್ಥೆಯ ಹಿರಿಮೆ-ಗರಿಮೆಗೆ ನಿದರ್ಶನವಾಗಿದೆ. ಮೂರನೆಯ ಸಂಸ್ಥೆಯಾದ ಮಹಿಳಾ ಯೋಗ ವಿಜ್ಞಾನ ಕೇಂದ್ರದ ಹರವು ವಿಸ್ತಾರವಾದುದು. ಮಹಾಶಿವಶರಣೆ ಅಕ್ಕಮಹಾದೇವಿ ಹೆಸರಿನಲ್ಲಿ ಪ್ರಾರಂಭವಾದ ಈ ಸಂಸ್ಥೆಯು, ಮಹಿಳೆಯರು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗುವ ಸಲುವಾಗಿ ಯೋಜನೆ ಹಾಕಿಕೊಂಡಿತು. ಅವರಿಗೆ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಅರಿವನ್ನು ಮೂಡಿಸುವದು. ವಿಶೇಷ ಸಂದರ್ಭಗಳಲ್ಲಿ ಸಂಗೀತ, ಕರಕುಶಲ ತರಬೇತಿ, ಉಪನ್ಯಾಸ, ಕಾರ್ಯಾಗಾರ, ವಿವಿಧ ಸ್ಪರ್ಧೆಗಳನ್ನು ನಡೆಸುವುದರ ಜೊತೆಗೆ ನಾಡಹಬ್ಬ-ವನಮಹೋತ್ಸವ ಆಚರಿಸುವುದು ಹಾಗೂ ಪ್ರತಿ ರವಿವಾರ `ಅನ್ವೇಷಣೆ’ಯ ಮೂಲ ಪ್ರಚಲಿತ ವಿಷಯಗಳ ಸಮಸ್ಯೆಗಳ ಕುರಿತಾಗಿ ಚಿಂತನ-ಮಂಥನ ಏರ್ಪಡಿಸುವದು. ಹೀಗಾಗಿ ಈ ಸಂಸ್ಥೆಯು ತಾಯಂದಿರ ಸಂಸ್ಥೆ ಎಂದರೆ ಅತಿಶಯೋಕ್ತಿಯಾಗದು.

ಇಷ್ಟೆಲ್ಲಾ ಬೆಳೆಯಲು ಕೆ.ಎಸ್. ಪಲ್ಲೇದ ಹಾಗೂ ಸಮಾನ ಮನಸ್ಕರರಾದ ಎಂ.ಎಸ್. ಶಿರಿಯಣ್ಣವರ, ಡಾ. ಎಂ.ವಿ. ಐಹೊಳ್ಳಿ, ಡಾ. ಎಸ್.ಕೆ. ನಾಲ್ವತ್ತವಾಡಮಠ, ವಿ.ಎಂ. ಮುಂದಿನಮನಿ, ಕೆ.ವಿ. ಗೋಣಿ, ಎಸ್.ಎಸ್. ಪಟ್ಟಣಶೆಟ್ಟಿ, ಎಂ.ಎಸ್. ಅಂಗಡಿ ಹಾಗೂ ಶಾಂತಾ ಕೋನ್ನವರ, ಅನ್ನಪೂರ್ಣ ವರವಿ, ಜಯಶ್ರೀ ವಸ್ತçದ, ವಿಜಯ ಚನ್ನಶೆಟ್ಟಿ, ಜಯಶ್ರೀ ಡಾವಣಗೇರಿ, ಸುಲೋಚನಾ ಐಹೊಳ್ಳಿ ಪಾರ್ವತಿ ಭೂಮಾ, ಮಹಾದೇವಿ ಚರಂತಿಮಠ, ವಿಜಯಲಕ್ಷ್ಮಿ ಆನೆಹೊಸೂರ, ಅನ್ನಪೂರ್ಣ ಅಸೂಟಿ ಮುಂತಾದ ತಾಯಂದಿರು ಇವರಿಗೆ ಕೈಜೋಡಿಸುತ್ತಿದ್ದಾರೆ.

ಈಗ 49ನೇ ವರ್ಷದ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸುವುದು ಮುಂದಿನ ವರ್ಷದ ಸುವರ್ಣ ಮಹೋತ್ಸವಕ್ಕೆ ಮುನ್ನುಡಿಯಾಗಬೇಕೆಂಬುದು ಯೋಗ ಬಂಧುಗಳೆಲ್ಲ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಹೆಸರಾಂತ ಚಿಂತಕರಾದ ಡಾ. ಎಸ್.ಟಿ. ನಂದಿಬೇವೂರ ಹಾಗೂ ಇವರ ದರ್ಮದಪತ್ನಿ, ಯೋಗ ಸಾಧಕಿ ಅರುಣಾ ನಂದಿಬೇವೂರ ಇವರನ್ನು ಕರೆಸುತ್ತಿರುವದು ಕಾರ್ಯಕ್ರಮದ ಘಟನತೆಗೆ ಸಾಕ್ಷಿಯಾಗಿದೆ. ಇದೇ ಸಂದರ್ಭದಲ್ಲಿ ಪಿ.ಎಸ್.ಐ. ಹುದ್ದೆಯಿಂದ ಸೇವಾ ನಿವೃತ್ತರಾದ ಸಂಗಮೇಶ ಜಕ್ಕನಗೌಡ್ರ, ಹುಬ್ಬಳ್ಳಿ ಹಾಗೂ ನಿಯೋಜಿತ ಕಟ್ಟಡದ ಆಯ್ದ ದಾನಿಗಳಾದ ಸಾಧಕರಿಗೆ ಸಂಮಾನ ಜರುಗಲಿರುವದು ಮುಕುಟುಪ್ರಾಯವಾಗಿದೆ.

ಈ ಸಂಸ್ಥೆಯ ಮಹಾನ್ ಯೋಜನೆಯಾದ, ಅಂದಾಜು 10 ಕೋಟಿ ರೂ ವೆಚ್ಚದ ಬೃಹತ್ ಯೋಗ ಕೇಂದ್ರವನ್ನು ಯೋಗಾಭಿಮಾನಿಗಳು, ಯೋಗ ಚಿಂತಕರು, ದಾನಿಗಳು, ಗದಗ ಪರಿಸರದ ಅಭಿಮಾನಿಗಳೆಲ್ಲರೂ ತನು-ಮನ-ಧನವನ್ನು ಸಲ್ಲಿಸಿ, ಸಾಮಾಜಿಕ ಆರೋಗ್ಯವನ್ನು ಕಾಪಾಡಬೇಕು, ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಬೇಕೆಂಬುದು ಸಂಚಾಲಕ ಕೆ.ಎಸ್. ಪಲ್ಲೇದ ಶರಣರ ಆಶಯವಾಗಿದೆ.

ಮುಂಬರುವ ಸುವರ್ಣ ಮಹೋತ್ಸವ ಸವಿನೆನಪಿಗಾಗಿ ಸುಸಜ್ಜಿತ ಯೋಗ ಮಹಾವಿದ್ಯಾಲಯ ಕಟ್ಟಡ ನಿರ್ಮಾಣಕ್ಕಾಗಿ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ಶ್ರೀಮಠದಿಂದ ನೀಡಿದ 2 ಎಕರೆ ಜಮೀನಿನಲ್ಲಿ ನಿರ್ಮಾಣಕಾರ್ಯ ಪ್ರಾರಂಭವಾಗಲಿದೆ. ಕಾರ್ಯದ ಯಶಸ್ಸಿಗೆ ಎಲ್ಲರೂ ಸಹಾಯ-ಸಹಕಾರಗಳನ್ನು ನೀಡಿ ರಾಷ್ಟçದ ಪ್ರಗತಿಗೆ ಸಹಕರಿಸಬೇಕಿದೆ.

-ಶಿವನಗೌಡ ಗೌಡರ.
ನಿವೃತ್ತ ಮುಖೋಪಾಧ್ಯಾಯರು, ಗದಗ.


Spread the love

LEAVE A REPLY

Please enter your comment!
Please enter your name here