ಪ್ರತಿಯೊಬ್ಬರೂ ಶಿಕ್ಷಣವಂತರಾಗಿ, ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಿ: ಸಿಎಂ ಸಿದ್ದರಾಮಯ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಅಂಬೇಡ್ಕರ್ ಅವರು ‘ಶಿಕ್ಷಣ, ಸಂಘಟನೆ, ಹೋರಾಟ’ ಎನ್ನುವ ಮಂತ್ರಗಳನ್ನು ನೀಡಿದ್ದಾರೆ. ಪ್ರತಿಯೊಬ್ಬರೂ ಶಿಕ್ಷಣವಂತರಾಗಿ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ದೇವರು ಯಾವುದೇ ಜಾತಿ ಅಥವಾ ಅಸಮಾನತೆಯನ್ನು ಸೃಷ್ಟಿಸಿಲ್ಲ, ಇವೆಲ್ಲವೂ ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಮಾಡಿಕೊಂಡಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಶನಿವಾರ ನಗರದ ಕನಕ ಭವನದ ರಾಕೇಶ್ ಸಿದ್ದರಾಮಯ್ಯ ಸಭಾಂಗಣದಲ್ಲಿ ಗದಗ ತಾಲೂಕು ಕುರುಬರ ಸಂಘದ ರಜತ ಮಹೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ, ರಾಜ್ಯಮಟ್ಟದ ಕನಕೋತ್ಸವ ಹಾಗೂ ಸಂಘಜೀವಿ ಫಕೀರಪ್ಪ ಹೆಬಸೂರ ಅವರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ವ್ಯವಸ್ಥೆ ಆಳವಾಗಿ ಬೇರೂರಿರುವ ಭಾರತದಲ್ಲಿ, ಶೋಷಿತ ಮತ್ತು ಅವಕಾಶ ವಂಚಿತರು ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ಸಂಘಟಿತರಾಗುವುದು ಅನಿವಾರ್ಯವಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಆರ್ಥಿಕ ಅಸಮಾನತೆಯನ್ನು ದೂರ ಮಾಡಲು ಜಾರಿಗೊಳಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ ಕೋಟಿ ರೂ. ರೂಪಾಯಿಗೂ ಹೆಚ್ಚು ಹಣ ವ್ಯಯಿಸಲಾಗುತ್ತಿದೆ. ಈ ಯೋಜನೆಗಳಿಂದ ಬೆಂಗಳೂರು ನಗರದಲ್ಲಿ ಮಹಿಳಾ ಉದ್ಯೋಗ ಶೇ. 23 ಮತ್ತು ಹುಬ್ಬಳ್ಳಿ‑ಧಾರವಾಡದಲ್ಲಿ ಶೇ. 21 ರಷ್ಟು ಹೆಚ್ಚಾಗಿದೆ. ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲಿಯೇ ನಂಬರ್ ಒನ್ ಸ್ಥಾನಕ್ಕೆ ಏರಿಕೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕನಕ ಭವನ ನಿರ್ಮಾಣಕ್ಕೆ ಭೂದಾನ ಮಾಡಿದ ಈಶ್ವರಸಾ ಮೆರವಾಡೆ ಅವರನ್ನು ಸನ್ಮಾನಿಸಲಾಯಿತು. ಫಕೀರಪ್ಪ ಹೆಬಸೂರ ಅವರ ಕುರಿತಾದ ಸಮಾಜಮುಖಿ’ ಅಭಿನಂದನಾ ಗ್ರಂಥ, ಬೆಳ್ಳಿ ಬೆಡಗು’ ಸ್ಮರಣ ಸಂಚಿಕೆ ಬಿಡುಗಡೆಗೊಂಡಿತು. ಸಿಎಂ ಸಿದ್ದರಾಮಯ್ಯ ಅವರನ್ನು ಕುರುಬರ ಸಂಘದ ಸದಸ್ಯರು ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು.

ಸರಕಾರದ ಮುಖ್ಯ ಸಚೇತಕ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ಸಂಘದ ಶ್ರೇಯೋಭಿವೃದ್ಧಿಗೆ 10 ಲಕ್ಷ ರೂ. ನೆರವು ನೀಡುವುದಾಗಿ ವಾಗ್ದಾನ ಮಾಡಿದರು.

ಸಮಾರಂಭದಲ್ಲಿ ರೋಣ ಶಾಸಕ ಜಿ.ಎಸ್. ಪಾಟೀಲ, ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ, ರಾಘವೇಂದ್ರ ಹಿಟ್ನಾಳ, ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ದಿ. ರಾಕೇಶ್ ಸಿದ್ದರಾಮಯ್ಯ ಅವರ ಪುತ್ರ ಧವನ್ ರಾಕೇಶ್, ಫಕೀರಪ್ಪ ಹೆಬಸೂರ, ರುದ್ರಣ್ಣ ಗುಳಗುಳಿ ಮುಂತಾದವರು ಉಪಸ್ಥಿತರಿದ್ದರು.

ಚುನಾವಣೆಯಲ್ಲಿ ಮೊದಲ ಓಟ್ಟು ಕುರುಬರದ್ದು. ಸಾಲ ಕೊಟ್ಟರೆ ವಾಪಸ್ ಕೊಡುವವರು ಕುರುಬರು. ಆದರೆ ಓಟ್ಟು ಹಾಕಿಸಿಕೊಂಡು ಗೆದ್ದ ನಂತರ, ಏನಾದರೂ ಸಹಾಯ ಕೇಳಿಕೊಂಡು ಹೋದರೆ, ಸ್ವತಃ ನಮ್ಮ ಕಾಂಗ್ರೆಸ್ ಶಾಸಕರೇ ಸಿದ್ದರಾಮಯ್ಯ ಬಳಿ ಹೋಗಿ ಎಂದು ಕೇಳಿದ್ದೇನೆ. ನೀವು (ಶಾಸಕರು) ಗೆದ್ದಿರುವುದು ಸಿದ್ದರಾಮಯ್ಯ ಅವರಿಂದ ಎನ್ನುವುದನ್ನು ಅರ್ಥ ಮಾಡಿಕೊಂಡು, ನಾವು ಕೇವಲ ಓಟಿಗಾಗಿ ಅಲ್ಲ, ನಮಗೂ ರಾಜಕೀಯ ಶಕ್ತಿ ಕೊಡಿ ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಅವರಿಗೆ ಎಚ್.ಎಂ. ರೇವಣ್ಣ ವಿನಂತಿಸಿದರು. ಫಕೀರಪ್ಪ ಹೆಬಸೂರ ಅವರು ತಮ್ಮ ಭಾಷಣದಲ್ಲಿ ತಮಗೂ ರಾಜಕೀಯ ಶಕ್ತಿ ಕೊಡಬೇಕು ಎಂದು ಸಚಿವ ಎಚ್.ಕೆ. ಪಾಟೀಲರಿಗೆ ವಿನಂತಿಸಿದರು.

ಕನಕ ಭವನ ಮತ್ತು ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನೆಯನ್ನು ಸ್ಮರಿಸಿಕೊಂಡ ಸಿದ್ದರಾಮಯ್ಯ, ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಅವರೊಂದಿಗೆ 42 ವರ್ಷಗಳ ಒಡನಾಟವಿದೆ. ಫಕೀರಪ್ಪ ಹೆಬಸೂರ, ರೊಳ್ಳಿ ಮತ್ತು ಕೊಪ್ಪ ಅವರಿಂದ ಈ ಕಾರ್ಯಕ್ರಮವು ಯಶಸ್ವಿಯಾಗಿದೆ ಎಂದರು.

“ರಾಜಕೀಯವನ್ನು ಮೀರಿ ಜನರ ಬದುಕಿನ ಬಗ್ಗೆ ಚಿಂತನೆ ಮಾಡುವವರು, ಯೋಜನೆಗಳನ್ನು ರೂಪಿಸಿ, ಅದನ್ನು ಗಟ್ಟಿಯಾಗಿ ಜಾರಿಗೊಳಿಸುವವರು ಸಿದ್ದರಾಮಯ್ಯ. ಹೀಗಾಗಿ ಅವರನ್ನು ಒಬ್ಬ ರಾಜಕಾರಣಿ ಎನ್ನುವುದಕ್ಕಿಂತ ಸಮಾಜ ಸುಧಾರಕ ಎಂದರೆ ತಪ್ಪಾಗಲಾರದು. ರಾಜ್ಯದಲ್ಲಿ ಬಡತನವನ್ನು ಬೇರು ಸಹಿತ ಕಿತ್ತೊಗೆದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ”

ಎಚ್.ಕೆ. ಪಾಟೀಲ.
ಕಾನೂನು, ಪ್ರವಾಸೋದ್ಯಮ ಸಚಿವರು.


Spread the love

LEAVE A REPLY

Please enter your comment!
Please enter your name here