ವಿಜಯಸಾಕ್ಷಿ ಸುದ್ದಿ, ಗದಗ : ಕೃಷಿ ಹಾಗೂ ಕುಟುಂಬ ಕಲ್ಯಾಣ ಮಂತ್ರಾಲಯ ನವದೆಹಲಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಕ್ಸ್ಟೆನ್ಶನ್ ಮ್ಯಾನೇಜ್‌ಮೆಂಟ್ ಹೈದರಾಬಾದ, ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ & ಜೀವನೋಪಾಯ ಇಲಾಖೆ ಮತ್ತು ಹುಲಕೋಟಿಯ ಐ.ಸಿ.ಎ.ಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಇವರ ಸಹಯೋಗದೊಂದಿಗೆ ನೈಸರ್ಗಿಕ ಕೃಷಿ ಕುರಿತಂತೆ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿ ಸಖಿಯರಿಗೆ) ಐದು ದಿನಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿ.ಪಂ ಯೋಜನಾ ನಿರ್ದೇಶಕ ಜಗದೇವ್ ಬಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರಿಗೆ ಕೃಷಿ ತಾಂತ್ರಕತೆಗಳನ್ನು ವರ್ಗಾವಣೆ ಮಾಡುವಲ್ಲಿ ಕೃಷಿ ಸಖಿಯರ ಪಾತ್ರ ಮುಖ್ಯವಾದುದು. ಈ ನಿಟ್ಟಿನಲ್ಲಿ ಎಲ್ಲ ಕೃಷಿ ಸಖಿಯರು ವಿವಿಧ ಋತುವಿನಲ್ಲಿ ಬೆಳೆಯುವ ಬೆಳೆಗಳಿಗೆ ಸೂಕ್ತ ಮಾಹಿತಿಯನ್ನು ತಿಳಿಸಬೇಕು ಮತ್ತು ಕೃಷಿ ವಿಸ್ತರಣಾ ಕಾರ್ಯಕರ್ತರಾಗಿ ತಮ್ಮ ಗ್ರಾಮದಲ್ಲಿ ರೈತರಿಗೆ ಸೇವೆಯನ್ನು ಒದಗಿಸಬೇಕೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಸುಧಾ ವ್ಹಿ.ಮಂಕಣಿ ಅಧ್ಯಕ್ಷೆತ ವಹಿಸಿ ಮಾತನಾಡಿ, ಕೃಷಿ ಸಖಿಯರು ರೈತರನ್ನು ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಲು ಪ್ರೋತ್ಸಾಹವನ್ನು ನೀಡಿ ರೈತರಿಗೆ ನೈಸರ್ಗಿಕ ಕೃಷಿಯ ಮಹತ್ವವನ್ನು ತಿಳಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ನೈಸರ್ಗಿಕ ಕೃಷಿ ತರಬೇತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ನೈಸರ್ಗಿಕ ಕೃಷಿಯ ಪರಿಕರಗಳ ತಯಾರಿಕೆಯ ಪ್ರಾತ್ಯಕ್ಷಿಕೆ ಹಾಗೂ ಅವುಗಳ ಮಹತ್ವ, ಮಣ್ಣಿನಲ್ಲಿರುವ ಪೋಷಕಾಂಶಗಳು, ಸಾವಯವ ಪರಿಕರಗಳು, ಪೌಷ್ಠಿಕ ತೋಟ, ಹೈನು ದನಗಳ ಪೋಷಣೆ, ನೈಸರ್ಗಿಕ ಕೃಷಿಯಲ್ಲಿ ತೋಟಗಾರಿಕೆ ಹಾಗೂ ಪ್ರಗತಿಪರ ರೈತರಿಂದ ಅನುಭವ ಹಂಚಿಕೆ ತರಬೇತಿಯ ವಿಶೇಷವಾಗಿತ್ತು.
ವಿಜ್ಞಾನಿಗಳಾದ ಡಾ. ವಿನಾಯಕ ನಿರಂಜನ್ ಸ್ವಾಗತಿಸಿದರು. ನಾರಾಯಣ ಭಂಡಿ, ಹೇಮಾವತಿ ಹಿರೇಗೌಡರ, ಸುರೇಶ ಹಳೇಮನಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಂಜೀವಿನಿ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಚಂದ್ರಶೇಖರ ಎಮ್.ಎಲಿಗಾರ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ರೈತರು ಮತ್ತು ಸಂಜೀವಿನ ಯೋಜನೆಗೆ ಕೃಷಿ ಸಖಿಯರು ಸೇತುವೆಯಾಗಿ ಕೆಲಸ ಮಾಡಬೇಕು. ಕೃಷಿ ಮಾಹಿತಿಯನ್ನು ಸಕಾಲದಲ್ಲಿ ರೈತರಿಗೆ ಮುಟ್ಟಿಸಲು ನೆರವಾಗಬೇಕೆಂದು ಹೇಳಿದರು.