ಬೆಂಗಳೂರು: ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಖಾನೆ ಮಾಲೀಕರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ 100 ಗ್ರಾಂ ಚಿನ್ನದ ಸರ ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಆರೋಪಿಯಾಗಿರುವ ನೆಲಮಂಗಲ ಮೂಲದ ಜಯಂತ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗಣೇಶ ಮೂರ್ತಿ ತಯಾರಿಕಾ ಕಾರ್ಖಾನೆ ನಡೆಸುತ್ತಿದ್ದ ಅಮರನಾರಾಯಣಸ್ವಾಮಿ ಅವರ ಬಳಿ ಜಯಂತ್ ಜೂನ್ ತಿಂಗಳಲ್ಲಿ ಕೆಲಸಕ್ಕೆ ಸೇರಿ ಕೇವಲ ಮೂರು ದಿನಗಳಲ್ಲಿ ಕೆಲಸ ಬಿಟ್ಟು ತೆರಳಿದ್ದ. ಸುಮಾರು ಆರು ತಿಂಗಳ ಬಳಿಕ ನವೆಂಬರ್ 13ರಂದು ಕಾರ್ಖಾನೆ ಬಳಿ ಹಾಜರಾಗಿ “ಬಿಡಿಎ ಸೈಟ್ ನೋಡೋಣ” ಎಂಬ ನೆಪದಲ್ಲಿ ದೂರುದಾರರನ್ನು ಅವರದೇ ಥಾರ್ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ಸೂಲಿಕೆರೆ ಬಳಿ ಎರಡು ಜಾಗ ತೋರಿಸಿದ ಬಳಿಕ ವಾಪಸ್ಸಾಗುತ್ತಿರುವ ವೇಳೆ, ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಜಯಂತ್ ದೂರುದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳವು ಮಾಡಲು ಯತ್ನಿಸಿದ್ದ.
ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆ ಆರೋಪಿ ಚಾಕುವಿನಿಂದ ಇರಿದು ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಬಳಿಕ ಪರಾರಿಯಾಗಲು ಯತ್ನಿಸಿದ ದೂರುದಾರರನ್ನು ಹಿಂಬಾಲಿಸಿ, ಟಾಟಾ ಏಸ್ ವಾಹನಕ್ಕೆ ಹತ್ತಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಅವರನ್ನು ಕುತ್ತಿಗೆಗೆ ಕೈ ಹಾಕಿ ಕೆಳಕ್ಕೆ ಎಳೆದಿದ್ದು, ಈ ಸಂದರ್ಭದಲ್ಲಿ ಅವಾಚ್ಯವಾಗಿ ಜಾತಿ ನಿಂದನೆ ಮಾಡಿ 100 ಗ್ರಾಂ ಚಿನ್ನದ ಸರ ಕಿತ್ತು ಓಡಿಹೋಗಿದ್ದಾನೆ. ಘಟನೆ ಆಧಾರವಾಗಿ ಹಲ್ಲೆ, ಕಳ್ಳತನ ಮತ್ತು ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಿದ ಕುಂಬಳಗೋಡು ಪೊಲೀಸರು, ತನಿಖೆ ಮುಂದುವರಿಸಿ ಆರೋಪಿ ಜಯಂತ್‌ನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.


