ಕನ್ನಡದ ಖ್ಯಾತ ಖಳನಟ ಹರೀಶ್ ರಾಯ್ ಅವರು ಇಂದು ನಿಧನ ಹೊಂದಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ನಿಧನರಾಗಿದ್ದಾರೆ.
ಹರೀಶ್ ರಾಯ್ ಅವರು ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಹೊಟ್ಟೆ ಉಬ್ಬರಗೊಂಡು, ದೇಹವೆಲ್ಲ ಕೃಷಗೊಂಡು ಗುರುತೇ ಸಿಗದಂತೆ ಆಗಿದ್ದರು ಹರೀಶ್ ರಾಯ್. ತಮ್ಮ ಚಿಕಿತ್ಸೆಗಾಗಿ ಅವರು ಸಹಾಯವನ್ನು ಸಹ ಅಂಗಲಾಚಿದ್ದರು.
ಅದರಂತೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿ ಬಳಗದವರು ಸೇರಿದಂತೆ ಇನ್ನು ಹಲವಾರು ಮಂದಿ ನಟ, ನಟಿಯರು ಹರೀಶ್ ರಾಯ್ ಅವರಿಗೆ ಆರ್ಥಿಕ ಸಹಾಯ ಮಾಡಿದ್ದರು. ನಟ ಯಶ್ ಸಹ ಈ ಹಿಂದೆಯೇ ತಮಗೆ ಸಹಾಯ ಮಾಡಿರುವುದಾಗಿ ಹರೀಶ್ ರಾಯ್ ಹೇಳಿಕೊಂಡಿದ್ದರು.
ಹಲವಾರು ಮಂದಿ ಸಿನಿಮಾ ಮಂದಿ ಹೋಗಿ ಹರೀಶ್ ರಾಯ್ ಅವರನ್ನು ಮಾತನಾಡಿಸಿ ತಾವು ಜೊತೆಗೆ ಇರುವುದಾಗಿ ಭರವಸೆ ನೀಡಿದ್ದರು. ಹಲವು ಯೂಟ್ಯೂಬರ್ಗಳು ಸಹ ಹೋಗಿದ್ದರು. ಕಳೆದ ಕೆಲ ತಿಂಗಳುಗಳಿಂದಲೂ ಸತತವಾಗಿ ಚಿಕಿತ್ಸೆಯನ್ನು ಪಡೆಯುತ್ತಲೇ ಇದ್ದರು ಹರೀಶ್ ರಾಯ್. ಇದೀಗ ಕೊನೆಗೆ ನಿಧನ ಹೊಂದಿದ್ದಾರೆ.
ಹರೀಶ್ ರಾಯ್ ಅವರು ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದರು. ಅಂಡರ್ ವರ್ಲ್ಡ್, ಮೀಂದುಮ್ ಒರು ಕಾದಲ್ ಕಧೈ, ರಾಜ್ ಬಹದ್ದೂರ್, ಸಂಜು ವೆಡ್ಸ್ ಗೀತಾ, ಸ್ವಯಂವರ, ಭೂಗತ, ನನ್ನ ಕನಸಿನ ಹೂವೆ, ನಲ್ಲ, ಜಾಫರ್ ಅಲಿಯಾಸ್ ಮುರ್ಗಿ ಜಾಫರ್, ಜೋಡಿ ಹಕ್ಕಿ, ತಾಯವ್ವ, ಓಂ ಹಾಗೂ ಸ್ಯಾಂಡಲ್ವುಡ್ನ ಟಾಪ್ ಸಿನಿಮಾ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ನಲ್ಲಿ ಅಭಿನಯಿಸಿದ್ದಾರೆ.


