ನಟ, ನಟಿಯರಿಗೆ ಅಭಿಮಾನಿಗಳು ದೇವಸ್ಥಾನ ಕಟ್ಟಿ ಪೂಜಿಸೋದನ್ನ ನೋಡಿದ್ದೇವೆ. ಈಗಾಗಲೇ ಕೆಲ ನಟಿ, ನಟಿಯರಿಗಾಗಿ ದೇವಸ್ಥಾನಗಳನ್ನು ನಿರ್ಮಾಣ ಮಾಡಲಾಗಿದೆ. ಇದೀಗ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರಿಗಾಗಿ ಅಭಿಮಾನಿಯೊಬ್ಬರು ಆಂಧ್ರಪ್ರದೇಶದಲ್ಲಿ ದೇವಸ್ಥಾನ ಕಟ್ಟಿದ್ದಾರೆ. ಸಮಂತಾಗಾಗಿ ಕಟ್ಟಿದ ದೇವಸ್ಥಾನದಲ್ಲೇ ನಟಿಯ ಬರ್ತ್ಡೇ ಸೆಲೆಬ್ರೇಟ್ ಮಾಡಲಾಗಿದ್ದು, ಈ ವೇಳೆ ಅನ್ನದಾನ ಮಾಡಲಾಗಿದೆ.
ಏಪ್ರಿಲ್ 28ರಂದು ಸಮಂತಾ ರುತ್ ಪ್ರಭು ಅವರ ಜನ್ಮದಿನ. ಎಲ್ಲೆಡೆ ಅಭಿಮಾನಿಗಳು ನೆಚ್ಚಿನ ನಟಿಯ ಬರ್ತಡೇ ಸೆಲೆಬ್ರೇಟ್ ಮಾಡಿದ್ದಾರೆ. ಇದೇ ವೇಳೆ ತೆನಾಲಿ ಸಂದೀಪ್ ಎಂಬ ಅಭಿಮಾನಿ ಸಮಂತಾಗಾಗಿ ದೇವಸ್ಥಾನ ನಿರ್ಮಿಸಿದ್ದಾರೆ. ಸಮಂತಾ ಅವರ ಎರಡು ಮೂರ್ತಿಗಳನ್ನು ಇಟ್ಟು ಪೂಜೆ ಮಾಡಲಾಗಿದೆ.
ನಟಿಯ ಬರ್ತಡೇ ಹಿನ್ನೆಲೆಯಲ್ಲಿ ಅನಾಥ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ತೆನಾಲಿ ಸಂದೀಪ್ ಅವರು ತಮ್ಮ ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ‘ನಾನು ಸಮಂತಾ ಅವರ ದೊಡ್ಡ ಅಭಿಮಾನಿ. ಕಳೆದ ಮೂರು ವರ್ಷದಿಂದ ಅವರ ಹುಟ್ಟುಹಬ್ಬ ಆಚರಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
‘ಪ್ರತಿ ವರ್ಷ ನಾನು ಕೇಕ್ ಕಟ್ ಮಾಡಿ, ಮಕ್ಕಳಿಗೆ ಊಟ ಹಾಕಿಸುತ್ತೇನೆ. ಸಮಂತಾ ರುತ್ ಪ್ರಭು ಅವರ ಸಮಾಜಮುಖಿ ಕೆಲಸಗಳು ನನಗೆ ಸ್ಫೂರ್ತಿ ಆಗಿವೆ. ಅವರ ಹಾದಿಯನ್ನೇ ನಾನು ಅನುಸರಿಸುತ್ತಿದ್ದೇನೆ’ ಎಂದು ತೆನಾಲಿ ಸಂದೀಪ್ ಹೇಳಿದ್ದಾರೆ.