ಹಾವೇರಿ: ಕೇವಲ ಒಂದು ಹೋರಿ ಅಲ್ಲ… ಗ್ರಾಮಸ್ಥರ ಹೆಮ್ಮೆ, ಅಭಿಮಾನಿಗಳ ಹೃದಯದ ಹೀರೋ ಆಗಿದ್ದ ‘ಕೊಬ್ಬರಿ ಹೋರಿ’ ಇದೀಗ ಅನಾರೋಗ್ಯದಿಂದ ನಿಧನರಾಗಿದ್ದು, ಕರ್ಜಗಿ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ.
ಕರ್ಜಗಿ ಓಂ–112 ಹೆಸರಿನಿಂದ ಪ್ರಸಿದ್ಧಿಯಾಗಿದ್ದ ಈ ಹೋರಿ, ರೈತ ಜಗದೀಶ್ ನಾಗಪ್ಪ ಮಾಣೆಗಾರ ಅವರ ಸಾಕಾಣಿಕೆಯಲ್ಲಿ ಬೆಳೆದಿತ್ತು. ನಾಲ್ಕು ವರ್ಷಗಳ ಹಿಂದೆ ಸುಮಾರು 3 ಲಕ್ಷ ರೂಪಾಯಿ ನೀಡಿ ಖರೀದಿಸಲ್ಪಟ್ಟ ಈ ಹೋರಿ, ರಾಜ್ಯಮಟ್ಟದ ಹೋರಿ ಸ್ಪರ್ಧೆಗಳಲ್ಲಿ ತನ್ನ ಶೌರ್ಯ ಪ್ರದರ್ಶಿಸಿ ಮೂರು ಬೈಕ್, ಬೆಳ್ಳಿ ಗದೆ, ಟ್ರಜೂರಿ ಸೇರಿದಂತೆ ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿತ್ತು.
‘ಅಭಿಮಾನಿಗಳ ಪೈಲ್ವಾನ್’ ಎಂದು ಕರೆಸಿಕೊಂಡಿದ್ದ ಕೊಬ್ಬರಿ ಹೋರಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆ ಗ್ರಾಮಕ್ಕೆ ಸಾವಿರಾರು ಜನರು ಆಗಮಿಸಿ ಅಂತಿಮ ದರ್ಶನ ಪಡೆದರು. ಮಾಲೀಕರು ಹೋರಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟ ದೃಶ್ಯ ಎಲ್ಲರನ್ನೂ ಕಳವಳಗೊಳಿಸಿತು.
ಗ್ರಾಮದ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಕೊಬ್ಬರಿ ಹೋರಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ನಂತರ ಮಾಲೀಕರ ಜಮೀನಿನಲ್ಲಿ ಗೌರವಪೂರ್ವಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.



