ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಪದವಿ ಹಂತವು ವಿದ್ಯಾರ್ಥಿ ಜೀವನದಲ್ಲಿ ಅತ್ಯಮೂಲವಾಗಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಬೇಕು. ಪಾಲಕರು, ಮಕ್ಕಳು ವಿದ್ಯಾವಂತರಾಗಿ ಸರ್ಕಾರಿ ಉದ್ಯೋಗವನ್ನು ಪಡೆಯುವುದಕ್ಕೆ ಅನೇಕ ಕನಸುಗಳನ್ನು ಹೊತ್ತಿರುತ್ತಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಪಾಲಕರು ಕಂಡ ಕನಸು ನನಸು ಮಾಡುವುದೇ ನಿಮ್ಮ ಆದ್ಯ ಕರ್ತವ್ಯವಾಗಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಮಂಗಳವಾರ ಶಿರಹಟ್ಟಿಯ ಶ್ರೀ ಜ.ಫ. ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ, ಎನ್‌ಎಸ್‌ಎಸ್ ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್ ಚಟುವಟಿಕೆಗಳ ಸಮಾರೋಪ ಹಾಗೂ ಬಿಎ ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೋಡುವ ಸಮಾರಂಭದಲ್ಲಿ ಮಾತನಾಡಿದರು.
ಶಿರಹಟ್ಟಿ ಸಿಪಿಐ ನಾಗರಾಜ ಮಾಢಳ್ಳಿ ಮಾತನಾಡಿ, ವಿದ್ಯಾರ್ಥಿಗಳು ದುರಭ್ಯಾಸಗಳಿಂದ ದೂರವಿದ್ದು, ಕಾಲೇಜಿನ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಸರ್ವತೋಮುಖ ಬೆಳವಣಿಗೆಗೆ ಗಮನ ನೀಡಬೇಕು. ಸರ್ಕಾರದ ಯೋಜನೆಯ ಫಲವಾಗಿ ಈಗ ಉನ್ನತ ಶಿಕ್ಷಣ ಎಲ್ಲೆಡೆ ಎಲ್ಲರಿಗೂ ಸುಲಭವಾಗಿ ಸಿಗುವಂತಾಗಿದೆ. ಅದನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಉತ್ತಮ ಕೆಲಸ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಉಮೇಶ ಅರಹುಣಸಿ ವಹಿಸಿದ್ದರು. ಸಿ.ಸಿ. ನೂರಶೆಟ್ಟರ, ಎಚ್.ಎಂ. ದೇವಗಿರಿ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಕೆ.ಎ. ಬಳಿಗೇರ, ಅಶೋಕ ವರವಿ, ಗೂಳಪ್ಪ ಕರಿಗಾರ, ನಂದಾ ಪಲ್ಲೇದ, ಗೀತಾ ಹಲಸೂರ, ನಂದಾ ಕಪ್ಪತ್ತನವರ, ಜಗದೀಶ ತೇಲಿ, ಮಂಜುನಾಥ ಸೊಂಟನೂರ, ಸಂತೋಷ ತೋಡೇಕರ, ಪರಶುರಾಮ ಡೊಂಕಬಳ್ಳಿ, ಡಾ. ಸವಿತಾ ಸಿದ್ದೂನವರ, ಬಸಪ್ಪ ಪರವ್ವನವರ ಉಪಸ್ಥಿತರಿದ್ದರು.