ವಿಮಾ ಕಂಪನಿಗಳಿಂದ ರೈತರಿಗೆ ಮೋಸ

0
Farmers block roads demanding compensation for crop damage
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ನರೇಗಲ್ಲ ಹೋಬಳಿಯಲ್ಲಿ ಕಳೆದ 8-10 ದಿನಗಳಿಂದ ಎಡಬಿಡದೆ ಸುರಿದ ಮಳೆ ರೈತಾಪಿ ವರ್ಗಕ್ಕೆ ಶಾಪವಾಗಿ ಪರಿಣಮಿಸಿದೆ. ಹಿಂಗಾರಿ ಬಿತ್ತನೆ ಮಾಡಿದ್ದ ಕಡಲೆ, ಕುಸುಬಿ ಮತ್ತಿತರ ಬೆಳೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ರೈತರ ಶ್ರಮವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

Advertisement

ಆದ್ದರಿಂದ ಸರಕಾರ ತಕ್ಷಣ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ರೈತ ಸೇನಾದ ಮುಖಂಡರು ಅಧ್ಯಕ್ಷ ಶರಣಪ್ಪ ಧರ್ಮಾಯತ ನೇತೃತ್ವದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ ಸರಕಾರವನ್ನು ಆಗ್ರಹಿಸಿದರು.

ಸ್ಥಳೀಯ ನಾಡ ಕಚೇರಿ ಬಳಿ ಜಮಾಯಿಸಿದ ರೈತರು, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಈ ವಿಷಯದಲ್ಲಿ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯ ಪ್ರವೇಶಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು. ಬೆಳೆ ವಿಮಾ ಕಂತನ್ನು ತುಂಬಿಸಿಕೊಳ್ಳುವ ಖಾಸಗಿ ಕಂಪನಿಗಳು ರೈತರಿಗೆ ಇನ್ನಿಲ್ಲದ ಮೋಸ ಮಾಡುತ್ತಿವೆ. ರೈತರ ಕೈಗೆ ಅಲ್ಪಸ್ವಲ್ಪ ಹಣವನ್ನು ನೀಡಿ ರೈತರ ಉಳಿದ ದುಡ್ಡನ್ನು ಲಪಟಾಯಿಸುತ್ತಿರುವುದು ನಮಗೆ ನೋವನ್ನುಂಟು ಮಾಡಿದೆ. ಈ ಖಾಸಗಿ ಕಂಪನಿಗಳ ಕಪಿಮುಷ್ಟಿಯಿಂದ ನಮಗೆ ಬಿಡುಗಡೆ ಕೊಡಿಸಿ ಎಂದು ಪ್ರಧಾನ ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ, ಕೃಷಿ ಮಂತ್ರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಆದ್ದರಿಂದ ಇನ್ನು ಮುಂದಾದರೂ ಬೆಳೆ ವಿಮೆಯನ್ನು ಸರಕಾರವೇ ತುಂಬಿಕೊಂಡು ರೈತರಿಗೆ ಸೂಕ್ತವಾದ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಆನಂದ ಕೊಟಗಿ, ಚಂದ್ರು ಹೊನವಾಡ, ಶಿವನಗೌಡ ಕಡದಳ್ಳಿ, ಶೇಖರಗೌಡ ಲಕ್ಕನಗೌಡರ, ಶರಣಪ್ಪ ಗಂಗರಗೊಂಡ, ಮೋದಿನಸಾಬ ಬಾಳಿಕಾಯಿ. ಶರಣಪ್ಪ ಕುಷ್ಟಗಿ, ವಿರಪಣ್ಣ ಲಕ್ಕನಗೌಡ್ರ ಇನ್ನೂ ಮುಂತಾದ ರೈತರು ಪಾಲ್ಗೊಂಡಿದ್ದರು.

ಸ್ಥಳಕ್ಕೆ ಆಗಮಿಸಿದ ಗಜೇಂದ್ರಗಡ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ, ನೀವು ಇಟ್ಟಿರುವ ಬೇಡಿಕೆಗಳನ್ನು ಇಲ್ಲಿ ಪೂರೈಸಲು ಸಾಧ್ಯವಿಲ್ಲ. ಇವುಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕಳಿಸಲಾಗುತ್ತಿದೆ. ಅಲ್ಲಿಂದ ಏನು ಮಾಹಿತಿ ಬರುತ್ತದೆಯೋ ಅದನ್ನು ತಮ್ಮ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

 


Spread the love

LEAVE A REPLY

Please enter your comment!
Please enter your name here