ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾಡಳಿತದ ಅಧಿಕಾರಶಾಹಿ ಧೋರಣೆ ಖಂಡಿಸಿ ಹಾಗೂ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 5ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಬಸವರಾಜ ಸವಳಿ ಹೇಳಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟುಮಚಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳೆ ವೀಕ್ಷಣೆಗೆ ಬಂದ ಅಧಿಕಾರಿಗಳು ರೈತರೊಂದಿಗೆ ನಿರ್ಲಕ್ಷ್ಯವಾಗಿ ವರ್ತಿಸಿದ್ದು, ಕಾಟಾಚಾರಕ್ಕೆ ಬೆಳೆ ವೀಕ್ಷಣೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಜುಲೈ 21ರಂದು ಬೆಳೆ ವಿಮೆ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಹೋದ ವೇಳೆ ರೈತರೊಂದಿಗೆ ಅವಮಾನಕರವಾಗಿ ವರ್ತಿಸಿ ಪೊಲೀಸರನ್ನು ಕರೆಸುವ ಮೂಲಕ ಅಧಿಕಾರದ ದರ್ಪ ಪ್ರದರ್ಶಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
2025-26ನೇ ಸಾಲಿನ ಬೆಳೆ ಹಾನಿಗೆ ಸಮರ್ಪಕ ಪರಿಹಾರ ನೀಡಬೇಕು, ಗದಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು, ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಬೆಳೆ ವಿಮೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ರೈತರ ಸಮಸ್ಯೆಗಳಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ನರಗುಂದ ಬಂಡಾಯದ ಮಾದರಿಯಲ್ಲೇ ಗದಗ ಜಿಲ್ಲೆಯಲ್ಲೂ ರೈತರ ಬೃಹತ್ ಹೋರಾಟಕ್ಕೆ ನಾಂದಿ ಹಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಗಮೇಶ ಪವಾಡಶೆಟ್ಟಿ, ವಿಜಯಕುಮಾರ ಸುಂಕದ, ಮುತ್ತನಗೌಡ ಚೌಡರಡ್ಡಿ, ವೀರಪ್ಪ ಕಾಳಗಿ, ಮುತ್ತಪ್ಪ ಜಗಲ್, ಯಲ್ಲಪ್ಪ ಗುರಿಕಾರ, ಗುರುಲಿಂಗಪ್ಪ ತಿಪ್ಪಶೆಟ್ಟಿ ಹಾಗೂ ಶರಣಪ್ಪ ಫಕ್ಕೀರಪ್ಪ ಉಪಸ್ಥಿತರಿದ್ದರು.



