ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ರೈತರಿಗೆ ಅನುಕೂಲವಾಗುವಂತೆ ಸರಕಾರ ಇತ್ತೀಚೆಗೆ ದಿ ಶಿರಹಟ್ಟಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ವತಿಯಿಂದ ಮೆಕ್ಕೆಜೋಳ ಖರೀದಿಸಲು ಅನುಮತಿ ನೀಡಿದೆ. ಆದರೆ ಸದ್ಯ ನೋಂದಣಿ ಕಾರ್ಯ ಸ್ಥಗಿತಗೊಂಡಿದ್ದ ಇದ್ದರಿಂದ ಯಾವಾಗ ನೋಂದಣಿ ಪ್ರಾರಂಭವಾಗುತ್ತದೆ ಎಂದು ರೈತರು ಕಾಯುತ್ತಿದ್ದಾರೆ.
ಶಿರಹಟ್ಟಿಯಲ್ಲಿ ಟಿಎಪಿಸಿಎಂಎಸ್ ಮೂಲಕ ಇಲ್ಲಿಯವರೆಗೆ 216 ಕ್ವಿಂಟಾಲ್ ಮತ್ತು ಕೆಎಂಎಫ್ ವತಿಯಿಂದ 71 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ನೋಂದಣಿಯಾಗಿದ್ದು, ಇನ್ನೂ ಸಾವಿರಕ್ಕೂ ಅಧಿಕ ರೈತರು ನೋಂದಣಿಗೆ ತಮ್ಮ ದಾಖಲೆಗಳನ್ನು ನೀಡಿದ್ದಾರೆ ಎನ್ನಲಾಗಿದ್ದು, ಸದ್ಯ ನೋಂದಣಿ ಸ್ಥಗಿತಗೊಂಡಿದ್ದ ಇದ್ದರಿಂದ ರೈತರು ನಿತ್ಯವೂ ಖರೀದಿ ಕೇಂದ್ರದತ್ತ ಅಲೆದಾಟ ನಡೆಸುತ್ತಿದ್ದಾರೆ.
ಮೆಕ್ಕೆಜೋಳ ಖರೀದಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸುವುದಕ್ಕೆ ಸ್ಥಳೀಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸರಕಾರದ ಮಟ್ಟದಲ್ಲಿ ಸತತ ಪ್ರಯತ್ನ ನಡೆಸುತ್ತಿದ್ದು, ರೈತರು ಅನುಭವಿಸುತ್ತಿರುವ ತೊಂದರೆಯನ್ನು ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ನಿತ್ಯವೂ ತಲುಪಿಸುತ್ತಿದ್ದಾರೆ. ಆದರೆ ಖರೀದಿ ಕೇಂದ್ರದಲ್ಲಿ ಲಾಗಿನ್ ಓಪನ್ ಆಗದೇ ಇರುವುದರಿಂದ ರೈತರ ನೋಂದಣಿ ಸಾಧ್ಯವಾಗುತ್ತಿಲ್ಲ.
ಶಿರಹಟ್ಟಿ ಪಟ್ಟಣವೂ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಮೆಕ್ಕೆಜೋಳ ಬೆಳೆದ ಬಹುತೇಕ ರೈತರು ಬೆಂಬಲ ಬೆಲೆಯಲ್ಲಿಯೇ ಮೆಕ್ಕೆಜೋಳವನ್ನು ಮಾರಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ಆದರೆ ಖರೀದಿ ಕೇಂದ್ರದಲ್ಲಿ ನೋಂದಣಿ ಕಾರ್ಯ ಸ್ಥಗಿತಗೊಂಡಿರುವ ಇದ್ದರಿಂದ ಕೆಲವರು ಕಡಿಮೆ ಬೆಲೆಗೆ ಅಲ್ಲಲ್ಲಿ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ನಿಗದಿಪಡಿಸಿರುವ ಬೆಂಬಲ ಬೆಲೆಗೆ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿಯೇ ಸಮರ್ಪಕವಾಗಿ ವಿಕ್ರಯವಾಗುವಂತೆ ಸಕಲ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ತಾಲೂಕಿನ ರೈತರು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ದಿ ಶಿರಹಟ್ಟಿ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಖರೀದಿ ಕೇಂದ್ರದಲ್ಲಿ ನೋಂದಣಿ ಸ್ಥಗಿತಗೊಂಡಿದ್ದ ಇದ್ದರಿಂದ ನಿತ್ಯವೂ ನೂರಾರು ರೈತರು ಪರದಾಡುತ್ತಿದ್ದಾರೆ. ಇದರಿಂದ ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಈ ಕೂಡಲೇ ನೋಂದಣಿ ಪ್ರಾರಂಭಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ ಕೆ. ರಾಘವೇಂದ್ರ ರಾವ್, ಶಿರಹಟ್ಟಿ ತಾಲೂಕಿನಲ್ಲಿ ಈವರೆಗೆ 287 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ನೋಂದಣಿಯಾಗಿದ್ದು, ಅದರಲ್ಲಿ 16 ಜನ ರೈತರ 533 ಕ್ವಿಂಟಾಲ್ ಖರೀದಿ ಪ್ರಕ್ರಿಯೆಯೂ ಆಗಿದೆ. ಲಾಗಿನ್ ಪ್ರಾರಂಭವಾದ ನಂತರ ನೋಂದಣಿ ಪ್ರಕ್ರಿಯೆ ಮುಂದುವರೆಯಲಿದೆ ಎಂದರು.



