ಧಾರವಾಡ: ಗಿರವಿ ಇಟ್ಟಿದ್ದ ಚಿನ್ನವನ್ನು ವಾಪಸ್ ನೀಡುವಂತೆ ಕೇಳಿದ ವಿಚಾರಕ್ಕೆ ಗಲಾಟೆ ನಡೆದು, ಚಿನ್ನದಂಗಡಿ ಮಾಲೀಕ ಗುಂಡು ಹಾರಿಸಿದ ಘಟನೆ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಅಪ್ಪ-ಮಗ ಗಂಭೀರವಾಗಿ ಗಾಯಗೊಂಡಿದ್ದು, ಶಾಲೆಯಿಂದ ಮನೆಗೆ ತೆರಳುತ್ತಿದ್ದ 10 ವರ್ಷದ ಬಾಲಕಿಯೊಬ್ಬಳಿಗೂ ಗುಂಡು ತಗುಲಿದೆ.
ಜೀರಿಗವಾಡ ಗ್ರಾಮದ ನಿಂಗಪ್ಪ ಹೊರಕೇರಿ ಹಾಗೂ ಅವರ ಪುತ್ರ ಸಿದ್ದಪ್ಪ ಹೊರಕೇರಿ ನಾಲ್ಕು ವರ್ಷಗಳ ಹಿಂದೆ ಗರಗ ಗ್ರಾಮದ ಚಿನ್ನದಂಗಡಿ ಮಾಲೀಕ ಮೌನೇಶ್ ಬಳಿ ಸುಮಾರು 40 ಗ್ರಾಂ ಚಿನ್ನವನ್ನು 60 ಸಾವಿರ ರೂ. ಸಾಲಕ್ಕೆ ಗಿರವಿ ಇಟ್ಟಿದ್ದರು. ಇದೀಗ ಹಣವನ್ನು ಮರುಪಾವತಿಸಿ ಚಿನ್ನವನ್ನು ಬಿಡಿಸಿಕೊಳ್ಳಲು ಮುಂದಾದ ಅವರು, ಚಿನ್ನವನ್ನು ಹಿಂದಿರುಗಿಸುವಂತೆ ಅಥವಾ ಪ್ರಸ್ತುತ ಮಾರುಕಟ್ಟೆ ದರದ ಹಣವನ್ನು ನೀಡುವಂತೆ ಕೇಳಿದ್ದಾರೆ.
ಆದರೆ, ಗಿರವಿ ಇಟ್ಟಿದ್ದ ಚಿನ್ನವನ್ನು ಮುರುಗಡೆ ಮಾಡಲಾಗಿದೆ ಎಂದು ಮೌನೇಶ್ ತಿಳಿಸಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಉಂಟಾಗಿ, ಅದು ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೇ ವೇಳೆ ಮೌನೇಶ್ ತನ್ನ ಬಳಿ ಇದ್ದ ರಿವಾಲ್ವರ್ನಿಂದ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.
ಘಟನೆಯಲ್ಲಿ ಸಿದ್ದಪ್ಪ ಹೊರಕೇರಿಗೆ ಹೊಟ್ಟೆ ಭಾಗಕ್ಕೆ, ನಿಂಗಪ್ಪ ಹೊರಕೇರಿಗೆ ಹೊಟ್ಟೆ ಹಾಗೂ ಕಾಲಿಗೆ ಗುಂಡು ತಗುಲಿದ್ದು, ಗಂಭೀರ ಗಾಯಗಳಾಗಿವೆ. ಇದೇ ವೇಳೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಗರಗ ಗ್ರಾಮದ 10 ವರ್ಷದ ಬಾಲಕಿಯ ಕಾಲಿಗೂ ಗುಂಡು ತಗುಲಿದೆ.
ಗಾಯಾಳುಗಳನ್ನು ತಕ್ಷಣ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಗುಂಜನ್ ಆರ್ಯ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಚಿನ್ನದ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಗಲಾಟೆ ನಡೆದಿದ್ದು, ರಿವಾಲ್ವರ್ನಿಂದ ಗುಂಡು ಹಾರಿಸಲಾಗಿದೆ. ಎಷ್ಟು ಸುತ್ತು ಗುಂಡು ಹಾರಿಸಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬಾಲಕಿಗೆ ಗುಂಡು ತಗುಲಿರುವುದು ದುರದೃಷ್ಟಕರವಾಗಿದ್ದು, ಆಕೆಗೆ ಈ ವಿವಾದದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ಮೌನೇಶ್ನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.



