ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ನಮ್ಮ ಭಾರತೀಯ ಹಬ್ಬಗಳ ಆಚರಣೆಗಳಲ್ಲಿ ವ್ಯಕ್ತಿಯ ಮನೋವಿಕಾಸದ ಉದ್ದೇಶ ಅಡಗಿದೆ. ಅವುಗಳ ಸಮರ್ಪಕ ಆಚರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಹೇಳಿದರು.
ಇಲ್ಲಿನ ಲಿಂಗರಾಜ ನಗರ ದಸರಾ-2024ರ ಉತ್ಸವದಲ್ಲಿ ಮಂಗಳವಾರ ಸಂಜೆ ದಾಂಡಿಯಾಗೆ ಚಾಲನೆ ನೀಡುವ ಮುನ್ನ ಮಾತನಾಡಿದ ಜಿಲ್ಲಾಧಿಕಾರಿಗಳು, ಶಿವರಾತ್ರಿ ಒಂದು ದಿನದ ಹಬ್ಬ. ಶಿವನಿಂದ ಶುರುವಾಗಿ ನವರಾತ್ರಿಯ ಒಂಬತ್ತು ದಿನಗಳ ಶಕ್ತಿ ತುಂಬುವ ಹಬ್ಬದ ಆಚರಣೆ ನಮ್ಮದಾಗಿದೆ. ಮಹಿಳೆಯರು ಝೀರೋ ಅಲ್ಲ. ಅವರು ಕೌಟುಂಬಿಕ ವ್ಯವಸ್ಥೆಯ ಜೀವಾಳವಾಗಿದ್ದಾರೆ. ವಿಜಯದಶಮಿಯ ಉದ್ದೇಶ ವಿವಿಧ ಅವತಾರಗಳಿಗೆ ಪೂಜೆ ಸಲ್ಲಿಸುವ ಮೂಲಕ ಕುಟುಂಬದಲ್ಲಿ ಸಮೃದ್ಧಿ-ಶಾಂತಿ ನೆಲೆಸುವಂತೆ ಮಾಡುವುದಾಗಿದೆ ಎಂದರು.
ದಾಂಡಿಯಾದಂತಹ ಶಾರೀರಿಕ ಚಟುವಟಿಕೆಗಳ ಉದ್ದೇಶ ಕೇವಲ ಮೋಜು ಮಾಡುವುದಲ್ಲ. ಆಟ ಆಡುತ್ತ ದೇವಿಗೆ ಭಕ್ತಿ ಸಮರ್ಪಿಸುವ, ಆ ಮೂಲಕ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವ ಘನ ಉದ್ದೇಶ ಇಂತಹ ಆಚರಣೆಗಳ ಹಿಂದೆ ಅಡಗಿದೆ. ನಾವೆಲ್ಲ ದೇವಿಯ ಮುಂದೆ ಮಕ್ಕಳಾಗಿದ್ದು, ಆ ತಾಯಿಯ ಮೂಲಕ ಸೃಷ್ಟಿ-ಸ್ಥಿತಿ-ಲಯಗಳ ಸಂಕೇತವಾದ ಬ್ರಹ್ಮ-ವಿಷ್ಣು-ಮಹೇಶ್ವರರನ್ನು ಅರ್ಥೈಸಿಕೊಳ್ಳಬೇಕಿದೆ. ಒಳ್ಳೆಯ ರೀತಿಯಲ್ಲಿ ಬದುಕಲು ವಿವೇಕ ಬೇಕು, ಆ ವಿವೇಕದ ಸಂಕೇತವಾಗಿರುವ ಸರಸ್ವತಿಯ ಪೂಜೆಯೂ ದಸರಾದ ಕೊನೆಯ ಮೂರು ದಿನಗಳಲ್ಲಿ ನಡೆಯುತ್ತದೆ ಎಂದು ವಿಶ್ಲೇಷಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಜಗತ್ತಿನಲ್ಲಿ ಭಾರತದ ಸಂಸ್ಕೃತಿ ವಿಶೇಷವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಮಾತೆ ಜಗನ್ಮಾತೆ ಆಗುತ್ತಿದ್ದಾಳೆ ಎಂದರು.
ಇದೇ ಸಂದರ್ಭದಲ್ಲಿ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ಪಡೆದ ದಿವ್ಯಪ್ರಭು ಜಿ.ಆರ್.ಜೆ. ಅವರನ್ನು ಲಿಂಗರಾಜ ನಗರದ ಮಹಿಳೆಯರು ಉಡಿ ತುಂಬಿ, ಸನ್ಮಾನಿಸಿದರು. ಕಾರ್ಯಕ್ರಮವನ್ನು ಸಂಗಮೇಶ ಮೆಣಸಿನಕಾಯಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಾರ್ಪೊರೇಟರ್‌ಗಳಾದ ಉಮೇಶಗೌಡ ಕೌಜಗೇರಿ, ರಾಜಣ್ಣ ಕೊರವಿ, ದಸರಾ ಸಮಿತಿಯ ಪದಾಧಿಕಾರಿಳಾದ ಜಿ.ವಿ. ವಳಸಂಗ, ರಾಜಣ್ಣ ಬತ್ಲಿ, ಸಾಹೇಬಗೌಡ ಪೊಲೀಸಪಾಟೀಲ್, ಎಸ್.ಎಂ. ತೊಗರ್ಸಿ, ಗಿರಿಜಾ ಸಂಗೊಳ್ಳಿ, ನಿರ್ಮಲಾ ಝಳಕಿ ಸೇರಿದಂತೆ ಬಡಾವಣೆಯ ಸಾವಿರಾರು ನಾಗರಿಕರು ಉಪಸ್ಥಿತರಿದ್ದರು.
ಐ.ಎ.ಎಸ್. ತಯಾರಿಗೆ ಓದಿರುವ ಪುಸ್ತಕಗಳಿಗಿಂತ ಐ.ಎ.ಎಸ್. ನಂತರ ಹೆಚ್ಚಿನ ಪುಸ್ತಕಗಳನ್ನು ಓದುತ್ತಿರುವುದಾಗಿ ಹೇಳಿದ ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಕ್ಕಳ ಮೇಲೆ ತಮ್ಮ ಯಾವುದೇ ರೀತಿಯ ಕನಸುಗಳನ್ನು, ಒತ್ತಡಗಳನ್ನು ಹೇರಬಾರದು ಎಂದು ಪಾಲಕರಿಗೆ ಮನವಿ ಮಾಡಿದರು. ಜ್ಞಾನಕ್ಕೆ ಮಿತಿ ಇಲ್ಲ, ಕೊನೆ ಇಲ್ಲ. ಮಕ್ಕಳಿ ಪಠ್ಯ-ಪುಸ್ತಕಗಳ ಜೊತೆಗೆ ಇತರ ಪುಸ್ತಕಗಳನ್ನೂ ಓದುವಂತೆ ಪ್ರೊತ್ಸಾಹಿಸಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.