ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರಿನಲ್ಲಿನ ಅತಿವೃಷ್ಟಿಯಿಂದ ಬೆಳೆಹಾನಿಯಾಗಿ ರೈತರು ಸೇರಿ ಜನಸಾಮಾನ್ಯರು ಸಂಕಷ್ಟದಲ್ಲಿರುವ ಸಂದರ್ಭದ ನಡುವೆಯೂ ನಾಡಿನ ದೊಡ್ಡ ಹಬ್ಬ ದೀಪಾವಳಿಯನ್ನು ಸಂಪ್ರದಾಯಬದ್ಧವಾಗಿ ಸಡಗರ ಸಂಭ್ರಮದಿಂದಲೇ ಆಚರಿಸಲು ಅಣಿಯಾಗಿರುವುದು ಬೆಳಕಿನ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದೆ.
ವಿಶೇಷ ಪೂಜಾ ಸಾಮಗ್ರಿ, ಸಿರಾಮಿಕ್ ಮತ್ತು ಮಣ್ಣಿನ ಹಣತೆ, ಆಕಾಶ ಬುಟ್ಟಿ, ಅಲಂಕಾರಿಕ ವಸ್ತುಗಳು, ಹೂವು-ಹಣ್ಣು, ಹೊಸ ಬಟ್ಟೆ, ಮೊಬೈಲ್ ಸೇರಿ ಎಲೆಕ್ಟ್ರಾನಿಕ್ಸ್, ದಿನಸಿ, ಪೂಜಾ ಸಾಮಗ್ರಿ ಅಂಗಡಿಗಳ ಮುಂದೆ ಖರೀದಿ ಭರಾಟೆ ಜೋರಾಗಿಯೇ ನಡೆಯಿತು. ಬಣ್ಣದ ವಿದ್ಯುತ್ ದೀಪಗಳು ಮತ್ತು ಆಕರ್ಷಕ ವಿನ್ಯಾಸದ ಆಕಾಶಬುಟ್ಟಿಗಳಿಗೆ ಬೇಡಿಕೆ ಹೆಚ್ಚಿ ಮಾರುಕಟ್ಟೆ ಪ್ರದೇಶ ಕಳೆಗಟ್ಟಿತ್ತು. ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಹಾವಳಿ ಆಂಜನೇಯ ದೇವಸ್ಥಾನದವರೆಗಿನ ಮುಖ್ಯ ಬಜಾರ್ ರಸ್ತೆಯುದ್ದಕ್ಕೂ ಹಬ್ಬದ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿಯೇ ನಡೆಯಿತು. ಇಟ್ಟಿಗೆರೆ ದಂಡೆಯ ಮೇಲೆ ಕಬ್ಬು, ಬಾಳೆ, ತಳಿರು-ತೋರಣ ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು, ಅಲಂಕಾರಿಕ ವಸ್ತುಗಳು, ಆಕಾಶಬುಟ್ಟಿ, ಪಟಾಕಿ, ದಿನಸಿ, ಬಟ್ಟೆ, ಆಭರಣ, ವಾಹನಗಳ ವ್ಯಾಪಾರ-ವಹಿವಾಟು ಜೋರಾಗಿಯೇ ನಡೆಯಿತು. ಹಬ್ಬದ ಸಾಮಗ್ರಿ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿತು. ಚೆಂಡು ಹೂವು ಕೆಜಿಗೆ 150 ರೂ, ಗಲಾಟೆ 200 ರೂ, ಸೇವಂತಿಗೆ 200-400 ರೂ, ಮಲ್ಲಿಗೆ, ಸುಗಂಧಿ, ಸೇವಂತಿ ಹೂವಿನ ಬೆಲೆ ಗಗನಕ್ಕೇರಿದ್ದವು. ಬಾಳೆ, ಕಬ್ಬು ಪ್ರತಿ ಜೋಡಿಗೆ 50 ರೂ ಮೇಲ್ಪಟ್ಟು ಮಾರಾಟವಾದವು. ಉಳಿದೆಲ್ಲ ಪೂಜಾ ಸಾಮಗ್ರಿಗಳ ಬೆಲೆಯಲ್ಲೂ ಹೆಚ್ಚಳ ಕಂಡು ಬಂದಿತು.
ಮಣ್ಣಿನ ಹಣತೆಯ ಬದಲಿಗೆ ಚಿತ್ತಾಕರ್ಷಕ ಸೆರಾಮಿಕ್ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದವು.
ಹಬ್ಬದ ವ್ಯಾಪಾರಕ್ಕೆ ಪಟ್ಟಣ ಸೇರಿ ಸುತ್ತಲಿನ ನೂರಾರು ಗ್ರಾಮಗಳ ಜನರು ಬರುವುದರಿಂದ ಮುಖ್ಯ ಮಾರುಕಟ್ಟೆ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಮಿತಿಮೀರಿತ್ತು. 2/3 ದಿನಗಳಿಂದ ಜನಸಂದಣಿಯಿಂದ ತುಂಬಿದ್ದು ಟ್ರಾಫಿಕ್ ಕಿರಿಕಿರಿ ತಪ್ಪಿಸುವಲ್ಲಿ ಪೊಲೀಸರು ಹರಸಾಹಸದ ನಡುವೆಯೂ ಜನಸಾಮಾನ್ಯರೂ ಪರದಾಡಬೇಕಾಯಿತು. ಕೆಲವು ರಸ್ತೆಗಳಲ್ಲಿ ಪಿಎಸ್‌ಐ ನಾಗರಾಜ ಗಡಾದ ನೇತೃತ್ವದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿ, ಸಂಚಾರ ದಟ್ಟಣೆಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು.
ಸೋಮವಾರ ನರಕ ಚತುರ್ದಶಿ ಅಭ್ಯಂಗ ಸ್ನಾನ, ಹಿರಿಯರ ಹಬ್ಬ ಸಂಜೆ ಕೆಲವರು ಅಂಗಡಿಗಳಲ್ಲಿ ಅಮವಾಸ್ಯೆ ಪೂಜೆ ಮಾಡಿದರು. ಮಂಗಳವಾರ ವ್ಯಾಪಾರಸ್ಥರು ಅಂಗಡಿಗಳಲ್ಲಿ ಮಹಾಲಕ್ಷ್ಮೀ ಪೂಜೆ ಮಾಡಿದರೆ ರೈತರು ತಮ್ಮ ವಾಹನಾದಿಗಳನ್ನು ಪೂಜಿಸುತ್ತಾರೆ. ಬುಧವಾರ ದೀಪಾವಳಿ ಪಾಡ್ಯ ಆಚರಣೆಗೆ ಎಲ್ಲರ ಮನೆ ಮತ್ತು ಅಂಗಡಿಗಳಲ್ಲಿ ಧನಲಕ್ಷ್ಮೀ ಪೂಜೆ ಮತ್ತು ವಾಹನಗಳಿಗೆ ಪೂಜೆ, ಉಡಿ ತುಂಬುವ ಮತ್ತು ಹಟ್ಟಿ ಪೂಜೆಗೆ ಸಕಲ ಸಿದ್ಧತೆಯೊಂದಿಗೆ ಸಂಭ್ರಮದಲ್ಲಿದ್ದಾರೆ.
ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಡಗರ-ಸಂಭ್ರಮ ಎಲ್ಲರ ಮನೆ-ಮನಗಳಲ್ಲಿ ಪ್ರಜ್ವಲಿಸುತ್ತಿದೆ. ಈ ದೀಪದ ಹಬ್ಬ ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಬೆಳಕು ಪಸರಿಸಲಿ. ಎಲ್ಲರ ಬಾಳಲ್ಲಿ ಶಾಂತಿ, ಸಂತೋಷ, ಸಮೃದ್ಧಿ ತರಲಿ. ಮಕ್ಕಳನ್ನು ಪಟಾಕಿ ಅಪಾಯದಿಂದ ದೂರವಿರಿಸಿ ಅದಕ್ಕಾಗಿ ಹಸಿರು ಪಟಾಕಿ ಬಳಸಿ, ಮಣ್ಣಿನ ಹಣತೆಯಲ್ಲಿ ದೀಪ ಬೆಳಗಿಸಿ, ಪರಿಸರ ಕಾಪಾಡಿ ಎಂಬುದು ನಮ್ಮ ಕಳಕಳಿ.