ಉಡುಪಿ: ಕ್ಷುಲ್ಲಕ ಕಾರಣಕ್ಕೆ ನಡೆದ ಹೊಟೇಲ್ ಗಲಾಟೆ ತೀವ್ರ ಹಿಂಸಾಚಾರಕ್ಕೆ ತಿರುಗಿರುವ ಘಟನೆ ಜನವರಿ 30ರ ರಾತ್ರಿ ಪಿಪಿಸಿ ಕ್ರಾಸ್ ಬಳಿ ನಡೆದಿದೆ. ತಲವಾರ್ ಹಾಗೂ ಕಬ್ಬಿಣದ ಚೇರ್ ಹಿಡಿದು ಗುಂಪೊಂದು ದಾಳಿ ನಡೆಸಿದ್ದು, ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ ಶರತ್ ಕುಂದರ್ (25) ಗಾಯಗೊಂಡಿದ್ದಾರೆ.
ಮಣಿಪಾಲದ ಹಕುನಾ ಮಟಾಟ ಹೊಟೇಲ್‌ನಲ್ಲಿ ಊಟದ ವೇಳೆ ಶರತ್ ಕುಂದರ್ ಅವರ ಕೈ ರಮಾನಂದ ಪೈ ಅವರ ಕೈಗೆ ತಾಕಿದ ವಿಚಾರವೇ ಈ ಗಲಾಟೆಗೆ ಕಾರಣವಾಗಿದೆ. ಮಾತಿನ ಚಕಮಕಿ ನಡೆದ ಬಳಿಕ ಶರತ್ ಕುಂದರ್ ಮನೆಗೆ ತೆರಳುವ ವೇಳೆ, ಪಿಪಿಸಿ ಕ್ರಾಸ್ ಬಳಿ ಮಾತುಕತೆ ನಡೆಸಲು ಅಕ್ಷತ್ ಪೈ ಕರೆ ಮಾಡಿ ನಿಲ್ಲುವಂತೆ ತಿಳಿಸಿದ್ದಾನೆ.
ಅದರಂತೆ ಶರತ್ ಕುಂದರ್ ಅವರು ತಮ್ಮ ಸ್ನೇಹಿತರೊಂದಿಗೆ ಕೋಸ್ಟಲ್ ಚಿಕನ್ ಅಂಗಡಿಯ ಎದುರು ಕಾಯುತ್ತಿದ್ದಾಗ, ರಾತ್ರಿ 11.30ರ ಸುಮಾರಿಗೆ ಟಾಟಾ ಸಫಾರಿ ಮತ್ತು ಮಹೀಂದ್ರ ಥಾರ್ ವಾಹನಗಳಲ್ಲಿ ಬಂದ ಆರೋಪಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.
ಅಕ್ಷತ್ ಪೈ, ಶಶಾಂಕ್ ಸೇರಿದಂತೆ 6–7 ಮಂದಿ ಕೈಯಲ್ಲಿ ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚೇರ್ ಹಿಡಿದು ಶರತ್ ಕುಂದರ್ ಅವರನ್ನು ಕೊಲ್ಲುವ ಉದ್ದೇಶದಿಂದ ತಲೆಗೆ ಬೀಸಿದ್ದಾರೆ. ತಪ್ಪಿಸಿಕೊಳ್ಳಲು ಅವರು ಕೈ ಮುಂದಕ್ಕೆ ಚಾಚಿದಾಗ, ಆರೋಪಿ ರಮಾನಂದ ಪೈ ತಲವಾರಿನಿಂದ ಬೀಸಿದ್ದು, ಬಲ ಅಂಗೈ, ಮಧ್ಯ ಬೆರಳು, ಎಡ ಕೈಮಣಿಗಂಟು ಹಾಗೂ ಕಿರು ಬೆರಳಿಗೆ ಗಂಭೀರ ಗಾಯಗಳಾಗಿವೆ.
ಘಟನೆಯ ವೇಳೆ ಶರತ್ ಕುಂದರ್ ಜೊತೆಗಿದ್ದ ಸ್ನೇಹಿತರು ಬೊಬ್ಬೆ ಹೊಡೆದ ನಂತರ ಆರೋಪಿಗಳು ಜೀವಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



