ಶಿವಮೊಗ್ಗ: ಲೋನ್ ಕಂತು ಒಂದು ತಿಂಗಳು ತಡವಾದ ಕಾರಣಕ್ಕೆ ಫೈನಾನ್ಸ್ ಕಂಪನಿಯ ಸಿಬ್ಬಂದಿ ರೈತನ ಎತ್ತು ಮತ್ತು ಹಸುಗಳನ್ನು ಬಲವಂತವಾಗಿ ಎಳೆದುಕೊಂಡು ಹೋಗಿರುವ ಘಟನೆ ಶಿವಮೊಗ್ಗ ತಾಲ್ಲೂಕಿನ ಸಿದ್ಲಿಪುರ ಗ್ರಾಮದಲ್ಲಿ ಜರುಗಿದೆ.
ಆಟೋದಲ್ಲೇ ಜಾನುವಾರುಗಳನ್ನು ಹೇರಿಕೊಂಡು ಸಿದ್ಲಿಪುರದಿಂದ ಶಿವಮೊಗ್ಗದ ಸವರ್ಲೈನ್ ರಸ್ತೆಯ ಆಯ್ ಫೈನಾನ್ಸ್ ಕಚೇರಿಗೆ ಕರೆದುಕೊಂಡು ಬಂದಿದ್ದಾರೆ.
ಜಾನುವಾರುಗಳ ಮಾಲೀಕರಾದವರು ಭರತ್, ಅವರು ಆಯ್ ಫೈನಾನ್ಸ್‌ನಲ್ಲಿ ₹2 ಲಕ್ಷ ಸಾಲ ಪಡೆದಿದ್ದರು. ಕಳೆದ ಒಂದೂವರೆ ವರ್ಷಗಳಿಂದ ಪ್ರತಿ ತಿಂಗಳು ₹9,300ರಂತೆ ಕಂತು ಕಟ್ಟುತ್ತಿದ್ದರೂ, ಇತ್ತೀಚೆಗೆ ಹಾಲು ಕೊಡುತ್ತಿದ್ದ ಒಂದು ಹಸು ಸತ್ತು ಹೋದ ಕಾರಣದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು.
ಅಕ್ಟೋಬರ್ ತಿಂಗಳ ಕಂತು ಬಾಕಿ ಉಳಿದಿದ್ದ ಕಾರಣಕ್ಕೆ ಫೈನಾನ್ಸ್ ಸಿಬ್ಬಂದಿ ಕಠಿಣ ಕ್ರಮ ತೆಗೆದುಕೊಂಡು ಜಾನುವಾರುಗಳನ್ನು ಎಳೆದುಕೊಂಡು ಹೋಗಿದ್ದಾರೆ.
ಈ ಘಟನೆ ಸ್ಥಳೀಯ ರೈತರು ಮತ್ತು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಫೈನಾನ್ಸ್ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.


