ಬಾಗಲಕೋಟೆ: ದೀಪಾವಳಿ ಸಂದರ್ಭದಲ್ಲಿ ಗದ್ದನಕೇರಿ ಗ್ರಾಮದಲ್ಲಿ ನಡೆದಿದ್ದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸ್ನೇಹಾ ಶಂಕರ ಮೇದಾರ (22) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅಕ್ಟೋಬರ್ 19ರಂದು ಗದ್ದನಕೇರಿ ಗ್ರಾಮದ ಮನೆಯಲ್ಲಿ ನಡೆದಿದ್ದ ಈ ದುರ್ಘಟನೆ ದೀಪಾವಳಿ ಆಚರಣೆಯ ವೇಳೆ ಸಂಭವಿಸಿತ್ತು. ಮನೆಯ ಮುಂದೆ ಹಚ್ಚಿ ಇಟ್ಟಿದ್ದ ದೀಪದಿಂದ ಬೆಂಕಿ ಆವರಿಸಿಕೊಂಡು, ಅಲ್ಲೇ ಹೊರಗಿಟ್ಟುಬಿಟ್ಟಿದ್ದ ಸಿಲಿಂಡರ್ ಸ್ಪೋಟಗೊಂಡಿತ್ತು. ಈ ದುರಂತದಲ್ಲಿ ಮನೆಯಲ್ಲಿದ್ದ ಎಂಟು ಮಂದಿ ಗಾಯಗೊಂಡಿದ್ದರು, ಅವರಲ್ಲಿ ಸ್ನೇಹಾ ಮೇದಾರ ಗಂಭೀರವಾಗಿ ಗಾಯಗೊಂಡಿದ್ದರು.
ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಸ್ನೇಹಾ ರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಈ ಘಟನೆ ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


