ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ಇವರಿಂದ ರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಕಾನೂನುಬದ್ಧ ದತ್ತು ಕುರಿತು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಸ್ವ-ಸಹಾಯ ಸಂಘಗಳ ಪ್ರತಿನಿಧಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರಿಯಾ ಯೋಜನೆಯನ್ನು ನೀಡಲಾಗಿತ್ತು.
ಧಾರವಾಡ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷವಾಗಿ ಜಿಲ್ಲೆಯ ಜನಪ್ರತಿನಿಧಿಗಳಿಂದ, ಚಿತ್ರನಟರು ಮತ್ತು ಜಾನಪದ ಕಲಾವಿದರಿಂದ, ಗಣ್ಯವ್ಯಕ್ತಿಗಳಿಂದ ಕಾನೂನುಬದ್ಧ ದತ್ತು ಕುರಿತು ಸಂದೇಶವನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಯಿತು. ನವೆಂಬರ್ ತಿಂಗಳ ಕಾರ್ತಿಕ ಮಾಸದ ನಿಮಿತ್ತ ಜಿಲ್ಲೆಯ ದೇವಸ್ಥಾನಗಳು, ಹುಬ್ಬಳ್ಳಿ ರೈಲ್ವೆ ನಿಲ್ದಾಣ ಹಾಗೂ ಕಛೇರಿಗಳಲ್ಲಿ ದತ್ತು ಕುರಿತ ರಂಗೋಲಿ ಚಿತ್ರಗಳನ್ನು ಬಿಡಿಸಿ ಪ್ರಚಾರ ಮಾಡಲಾಯಿತು. ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಿಂದ ಬೈಕ್‌ರ‍್ಯಾಲಿ , ವಾಕಥಾನ್ ಮೂಲಕ ಕಾನೂನುಬದ್ಧ ದತ್ತು ಕುರಿತು ಹೆಚ್ಚಿನ ಪ್ರಚಾರ ಮಾಡಲಾಯಿತು.
ಗ್ರಾಮ ಪಂಚಾಯತ, ಮಹಾನಗರ ಪಾಲಿಕೆಯ ವ್ಯಾಪ್ತಿಯ ಕಸ ವಿಲೇವಾರಿ ವಾಹನದಲ್ಲಿ ಆಡಿಯೋ ಜಿಂಗಲ್ಸ್ ಮೂಲಕ, ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ಕಾನೂನುಬದ್ಧವಾಗಿ ದತ್ತು ಪಡೆಯಲು ಮಾರ್ಗಸೂಚಿಗಳ ಕುರಿತು ಅರಿವು ಮೂಡಿಸಲಾಯಿತು.
ರಾಜ್ಯದಲ್ಲಿಯೇ ಎಲ್ಲ ಜಿಲ್ಲೆಗಳಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಅರಿವು ಮತ್ತು ಜಾಗೃತಿ ಕಾರ್ಯಕ್ರಮ들을 ಗಮನಿಸಿದ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಬೆಂಗಳೂರಿನ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ದತ್ತು ಪೋಷಕರ ಸಮಾವೇಶ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಕ್ಕಾಗಿ ಪ್ರಥಮ ಸ್ಥಾನ ನೀಡಿ ಗೌರವಿಸಿತು.
ಇದೇ ಸಂದರ್ಭದಲ್ಲಿ ಅಮೂಲ್ಯ (ಜಿ) ಶಿಶುಗೃಹ ಹುಬ್ಬಳ್ಳಿ ಸಂಸ್ಥೆಯಲ್ಲಿ ಪುಷ್ಪಾ ಉಳ್ಳಿಕಾಶಿ ಆಯಾ ಅವರನ್ನು ಮಕ್ಕಳ ಆರೈಕೆಯಲ್ಲಿ ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ದ್ವೀತಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕ ಪಡೆದ ಹುಬ್ಬಳ್ಳಿ ಘಂಟಿಕೇರಿ ಸಂಸ್ಥೆಯ ಬಾಲಕಿಯರ ಸರ್ಕಾರಿ ಬಾಲಮಂದಿರದ ಬಾಲಕಿ ವೀಣಾ ಬಡಿಗೇರಿ ಅವರನ್ನು ಸನ್ಮಾನಿಸಲಾಯಿತು.
ರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಧಾರವಾಡ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಶಂಸೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಕಾರಾ) ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸದಸ್ಯ ಕಾರ್ಯದರ್ಶಿ ಭಾವನಾ ಸಕ್ಸೆನಾ, ಬೆಂಗಳೂರಿನ ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕ ಡಾ. ಅಶೋಕ ಡಿ ಹಾಗೂ ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕ ಹಲೀಮಾ ಕೆ ಅವರು ಪ್ರಶಸ್ತಿಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.



