ಬೆಂಗಳೂರು: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಮುಂದುವರಿದಿದ್ದು, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂದು ನೂರಾರು ವಿಮಾನಗಳು ರದ್ದುಗೊಂಡಿವೆ, ಹಲವು ವಿಳಂಬವಾಗಿವೆ. ಇದರಿಂದ ಪ್ರಯಾಣಿಕರು ತೀವ್ರ ಆಕ್ರೋಶಗೊಂಡಿದ್ದು, ಏರ್ಪೋರ್ಟ್ನ ಆಗಮನ ದ್ವಾರಗಳು ಖಾಲಿಯಾಗಿವೆ.
ವಿಮಾನಗಳಿಲ್ಲದ ಕಾರಣ ಟ್ಯಾಕ್ಸಿ ಹಾಗೂ ಬಿಎಂಟಿಸಿ ಬಸ್ ಚಾಲಕರು ಆದಾಯವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಏರ್ಪೋರ್ಟ್ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇನ್ನೂ ಈ ಕುರಿತು ಕ್ಷಮೆಯಾಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಇಂಡಿಗೋ,
ಸಮಸ್ಯೆ ಅನುಭವಿಸಿದ ಗ್ರಾಹಕರು ಮತ್ತು ನಮ್ಮ ಉದ್ಯಮದ ಪಾಲುದಾರರಲ್ಲಿ ನಾವು ಮನಃಪೂರ್ವಕ ಕ್ಷಮೆ ಯಾಚಿಸುತ್ತೇವೆ. ಇಂಡಿಗೋ ತಂಡಗಳು ಪರಿಸ್ಥಿತಿ ನಿರ್ವಹಿಸಿ, ಸಾಮಾನ್ಯ ರೀತಿ ಕಾರ್ಯಾಚರಣೆ ನಡೆಸಲು ಡಿಜಿಸಿಎ, ಬಿಸಿಎಸಿ ಮತ್ತು ಎಎಐ ಹಾಗೂ ವಿಮಾನ ನಿಲ್ದಾಣದ ನಿರ್ವಾಹಕರ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದೆ.
ಇದೇ ವೇಳೆ, ಸಂಸ್ಥೆ ಮುಂದಿನ ಪ್ರಯಾಣದಲ್ಲಿ ಪ್ರಯಾಣಿಕರಿಗೆ ವಿಮಾನ ವೇಳಾಪಟ್ಟಿಯಲ್ಲಿನ ಯಾವುದೇ ಬದಲಾವಣೆಗಳ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಲಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಇತ್ತೀಚಿನ ಸ್ಥಿತಿಯನ್ನು ಪರಿಶೀಲಿಸುವಂತೆಯೂ ಸೂಚನೆ ನೀಡಿದೆ.



