ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಮುಖ್ಯ ಬಜಾರ್ ರಸ್ತೆಯಲ್ಲಿನ ಟ್ರಾಫಿಕ್ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಏಕಮುಖ ಸಂಚಾರ ಹಾಗೂ ವಾಹನ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಸಂಚಾರಿ ನಿಯಮಗಳನ್ನು ಜಾರಿಗೆ ತರುವ ಉದ್ದೇಶದಿಂದ ಸೋಮವಾರ ಪುರಸಭೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ರಸ್ತೆಯಲ್ಲಿ ಕಾರ್ಯಾಚರಣೆ ಕೈಗೊಂಡರು.
ಮುಖ್ಯಾಧಿಕಾರಿ ಮಹೇಶ ಹಡಪದ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಪುರಸಭೆ ಸಿಬ್ಬಂದಿಗಳು ಪುಟ್‌ಪಾತ್ ಮೇಲೆ ಇರಿಸಲಾಗಿದ್ದ ಹೆಚ್ಚುವರಿ ವಸ್ತುಗಳನ್ನು ತೆರವುಗೊಳಿಸುವ ಕಾರ್ಯ ಹಾಗೂ ವಾಹನಗಳನ್ನು ಒಂದೆಡೆ ನಿಲ್ಲಿಸುವ ಕಾರ್ಯವನ್ನು ಕೈಗೊಂಡರು.
ಪಟ್ಟಣದ ಮುಖ್ಯ ಬಜಾರ್ ರಸ್ತೆ ನಿತ್ಯ ಜನದಟ್ಟಣೆ, ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರವಾಗಿರುವ ಪಟ್ಟಣಕ್ಕೆ ತಾಲೂಕಷ್ಟೇ ಅಲ್ಲದೇ ನೆರೆಯ ಕುಂದಗೋಳ, ಶಿಗ್ಗಾಂವ, ಸವಣೂರ, ಶಿರಹಟ್ಟಿ, ಗದಗ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಕಳೆದ ಕೆಲ ವರ್ಷಗಳಿಂದ ಟ್ರಾಫಿಕ್ ಸಮಸ್ಯೆಯ ಬಗ್ಗೆ ಸಂಪೂರ್ಣ ನಿರ್ಲಕ್ಷ ಮಾಡಿರುವ ಪುರಸಭೆ ಮತ್ತು ಪೊಲೀಸ್ ಇಲಾಖೆ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಂಡು ಪುಟ್‌ಪಾತ್ ತೆರವು ಮತ್ತು ಟ್ರಾಫಿಕ್ ವ್ಯವಸ್ಥೆ ಸರಿಪಡಿಸುವ ದಿಸೆಯಲ್ಲಿ ಕಾರ್ಯ ಕೈಗೊಂಡಿರಲಿಲ್ಲ. ಇದೀಗ ಪುರಸಭೆ ಮತ್ತು ಪೊಲೀಸ್ ಇಲಾಖೆ ಈ ಕಾರ್ಯಕ್ಕೆ ಮುಂದಾಗಿದ್ದು, ಸೋಮವಾರದಿಂದ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ವ್ಯಾಪಾರಸ್ಥರಿಗೆ ತಿಳುವಳಿಕೆ ನೀಡುವ ಕಾರ್ಯವನ್ನು ಮಾಡಲಾಯಿತು.
ಸೋಮವಾರ ಪೊಲೀಸ್ ಇಲಾಖೆಯ ಗಮನಕ್ಕೆ ತಂದ ಮುಖ್ಯಾಧಿಕಾರಿಗಳು ತಮ್ಮ ಸಿಬ್ಬಂದಿಗಳು, ಪೌರಕಾರ್ಮಿಕರೊಂದಿಗೆ ಫುಟ್‌ಪಾತ್ ಒತ್ತವರಿ ತೆರವುಗೊಳಿಸುವ ಕಾರ್ಯ ಕೈಗೊಂಡರು. ಎಲ್ಲೆಂದರಲ್ಲಿ ನಿಲ್ಲಿಸಿದ್ದ ಬೈಕ್, ವಾಹನಗಳನ್ನು ತೆರವುಗೊಳಿಸಿ ರಸ್ತೆಯ ಒಂದು ಬದಿ ನಿಲ್ಲಿಸಿ ಎಚ್ಚರಿಕೆ ನೀಡಲಾಯಿತು. ಕಳೆದ ಮೂರು ದಿನಗಳ ಹಿಂದೆ ಬೀದಿಬದಿ ವ್ಯಾಪಾರಿಗಳು, ವ್ಯಾಪಾರಸ್ಥರ ಸಭೆಯಲ್ಲಿ ಎಲ್ಲರೂ ಸಹಕಾರ ನೀಡುವ ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆಯಿಂದಲೇ ಸಿಬ್ಬಂದಿಗಳು ಕಾರ್ಯಾಚರಣೆಗಿಳಿದು ತಿಳುವಳಿಕೆ ನೀಡಿ, ಎಚ್ಚರಿಸಿದರು.
ಈ ವೇಳೆ ಪುರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಮಂಜುಳಾ ಹೂಗಾರ, ಶಿವಣ್ಣ ಮ್ಯಾಗೇರಿ, ಬಸವಣ್ಣೆಪ್ಪ ನಂದೆಣ್ಣವರ ಪೊಲೀಸ್ ಸಿಬ್ಬಂದಿ ಪೌರ ಕಾರ್ಮಿಕರು ಇದ್ದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ರಸ್ತೆ ಅಭಿವೃದ್ಧಿ ಕಾರ್ಯದಿಂದ ಪುಟ್‌ಪಾತ್ ತೆರವು, ಟ್ರಾಫಿಕ್ ಸಮಸ್ಯೆ ಪರಿಹರಿಸುವಲ್ಲಿ ವಿಳಂಬವಾಗಿತ್ತು. ಇದೀಗ ಮುಖ್ಯ ಬಜಾರ್ ರಸ್ತೆ ಕಾಂಕ್ರೀಟ್ ರಸ್ತೆಯಾಗಿದ್ದು, ಕೂಡಲೇ ಪುರಸಭೆ ಮತ್ತು ಪೊಲೀಸ್ ಇಲಾಖೆಯ ಸಹಭಾಗಿತ್ವದಲ್ಲಿ ವ್ಯಾಪಾರಸ್ಥರ ಸಭೆ ಕರೆದು ಟ್ರಾಫಿಕ್ ಸಮಸ್ಯೆಗೆ ಪರಿಹಾರಕ್ಕಾಗಿ ವಿನಂತಿಸಿದ್ದು ಅದಕ್ಕೆ ಎಲ್ಲರೂ ಸಹಮತ ತಿಳಿಸಿದ್ದರು.
ಅದಕ್ಕಾಗಿ ಇಂದಿನಿಂದ ಕಾರ್ಯರೂಪಕ್ಕೆ ತರಲಾಗಿದ್ದು, ಫುಟ್‌ಪಾತ್ ಮೇಲೆ ವ್ಯಾಪಾರಸ್ಥರು ತಮ್ಮ ವಸ್ತುಗಳನ್ನು ಇಟ್ಟುಕೊಳ್ಳುವಂತಿಲ್ಲ. ಟ್ರಾಫಿಕ್ ಸಮಸ್ಯೆ ನಿಯಂತ್ರಣದಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರ ಸಹಕಾರವೂ ಮುಖ್ಯವಾಗಿದೆ ಎಂದು ಹೇಳಿದರು.