ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನುವ ಮಾತು ಸೂರ್ಯ-ಚಂದ್ರರಷ್ಟೇ ಸತ್ಯ. ತಾಯಿ ಮಗುವಿಗೆ ಜೀವ ನೀಡುವುದಷ್ಟೇ ಅಲ್ಲ, ಮಕ್ಕಳ ಆತ್ಮಜ್ಞಾನ ಮತ್ತು ಬದುಕಿನ ಬೆಳಕಾಗಿ ತಮ್ಮನ್ನೇ ಸಮರ್ಪಿಸಿಕೊಳ್ಳುತ್ತಾಳೆ ಎಂದು ತಾಯಿ ಪಾರ್ವತಿ ಮಕ್ಕಳ ಬಳಗದ ಉಪಾಧ್ಯಕ್ಷೆ ಜಯಲಕ್ಷ್ಮೀ ಮಹಾಂತಶೆಟ್ಟರ ಹೇಳಿದರು.
ಅವರು ಪಟ್ಟಣದ ಪಿಎಸ್‌ಬಿಡಿ ಬಾಲಕಿಯರ ಪ್ರೌಢಶಾಲೆಯಲ್ಲಿ 270 ವಿದ್ಯಾರ್ಥಿನಿಯರು ತಮ್ಮ ತಾಯಿಯಂದಿರಿಗೆ ಧನ್ಯತಾ ಭಾವದಿಂದ ಪಾದಪೂಜೆ ಮಾಡುವ ಕಾರ್ಯಕ್ರಮದ ವೇಳೆ ಮಾತನಾಡಿ, ಹಸುಗೂಸಿದ್ದಾಗಲೇ ತಾಯಂದಿರು ಅವರ ಭಾವನೆಗಳನ್ನು ಅರ್ಥೈಸಿಕೊಂಡು ಕಲಿಯಲು ಸನ್ನದ್ಧಗೊಳಿಸಿ ಸಮಾಜಕ್ಕೆ ಸಮರ್ಪಿಸುತ್ತಾಳೆ. ಮಕ್ಕಳಿಗೆ ಬಾಲ್ಯದಲ್ಲಿಯೇ ನಮ್ಮ ಸಂಸ್ಕೃತಿ, ಧರ್ಮ, ಸಂಬಂಧಗಳು, ಮಾನವೀಯ ಮೌಲ್ಯಗಳನ್ನು ಬಿತ್ತುತ್ತಾಳೆ. ಮಕ್ಕಳು ತಂದೆ-ತಾಯಿಯರ ಋಣ ತೀರಿಸಲು ಅಸಾಧ್ಯ. ಆದರೆ ಅವರ ಆಸೆ-ಕನಸುಗಳನ್ನು ಈಡೇರಿಸಬಹುದು. ಈ ನಿಟ್ಟಿನಲ್ಲಿ ಮಕ್ಕಳು ದೃಢ ಹೆಜ್ಜೆ ಇಡಬೇಕು ಎಂದರು.
ಶಾಲೆಯ ದೈಹಿಕ ಶಿಕ್ಷಕ ಮೃತ್ಯುಂಜಯ ಹಿರೇಮಠ ಅವರ ಮಂತ್ರಘೋಷದೊAದಿಗೆ ಪಾದಪೂಜೆ ಪ್ರಾರಂಭಗೊAಡಿತು. ಮಕ್ಕಳು ತಾಯಿಯಂದಿರ ಪಾದಗಳನ್ನು ತೊಳೆದು ವಿಭೂತಿ, ಕುಂಕುಮ, ಅರಿಶಿನ ಹಚ್ಚಿ ಹೂವು ಸಮರ್ಪಿಸಿ ಶೃದ್ಧಾ-ಭಕ್ತಿಯಿಂದ ಪೂಜಿಸಿದರು. ನಂತರ ಶಾಲಾ ಆಡಳಿತ ಹಾಗೂ ಶಿಕ್ಷಕಿಯರು ತಾಯಿಯಂದಿರಿಗೆ ಉಡಿ ತುಂಬಿದರು.
ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷೆ ಸುವರ್ಣಾಬಾಯಿ ಬಹಾದ್ದೂರ್ ದೇಸಾಯಿ, ಕಾರ್ಯದರ್ಶಿ ರೋಹಿಣಿಬಾಯಿ ಬಹಾದ್ದೂರ್ ದೇಸಾಯಿ, ಶಾರಕ್ಕ ಮಹಾಂತಶೆಟ್ಟರ, ಶಕುಂತಲಾ ಹೊರಟ್ಟಿ, ಮುಖ್ಯ ಶಿಕ್ಷಕ ಜೆ.ಡಿ. ಲಮಾಣಿ ಸಚ್ಚಿದಾನಂದ ಮಠದ, ರಾಜೇಶ ಉಮಚಗಿ, ಡಿ.ಜಿ. ವೈದ್ಯ, ಪಿ.ಎಲ್. ಪಾಟೀಲ, ಎಸ್.ಎಂ. ಹಾದಿಮನಿ, ಕಾವ್ಯಾ ಬಹಾದ್ದೂರ ದೇಸಾಯಿ, ಶೀಲಾ ತಳವಾರ, ಶ್ವೇತಾ ಅಂಬಲಿ, ವಿದ್ಯಾರ್ಥಿನಿಯರು, ತಾಯಿಯಂದಿರು ಸಾಕ್ಷಿಯಾಗಿದ್ದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಪಟ್ಟಣದಲ್ಲಿ ಮಹಿಳೆಯರಿಂದಲೇ ಪ್ರಾರಂಭವಾದ ತಾಯಿ ಪಾರ್ವತಿ ಮಕ್ಕಳ ಬಳಗದ ಶಿಕ್ಷಣ ಸಂಸ್ಥೆ ಮಕ್ಕಳಿಗೆ ವಿದ್ಯೆಯೊಂದಿಗೆ ವಿನಯ, ಸಂಸ್ಕಾರ, ಮೌಲ್ಯಗಳನ್ನು ಕಲಿಸುತ್ತಿರುವುದು ಶ್ಲಾಘನೀಯ. ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿರುವ ಕಾಲ ಘಟ್ಟದಲ್ಲಿ ನಮ್ಮ ಶ್ರೀಮಂತ ಸಂಸ್ಕೃತಿ, ಪರಂಪರೆ ಉಳಿಸುತ್ತಿರುವ ಶಾಲೆಯ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ ಎಂದರು.