ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇಂಗ್ಲ್ಯಾಂಡ್‌ನ ಮೆಂಚೆಸ್ಟರ್‌ದ ವೇಯ್ನ್ ಕಾರ್ಟರ್ ಮತ್ತು ಜಾನಿಸ್ ಕಾರ್ಟರ್ ದಂಪತಿಗಳು ಪಟ್ಟಣದ ಶ್ರೀ ಅನ್ನದಾನೇಶ್ವರ ವಿಕಲಚೇತನ ಮಕ್ಕಳ ಶಾಲೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಆಡಿ ನಲಿದರು.
ಮಕ್ಕಳೊಂದಿಗೆ ಮಕ್ಕಳಾಗಿ ಅವರದ್ದೇ ಆದ ಸಂಕೇತ ಭಾಷೆಯಲ್ಲಿ ಮುಕ್ತವಾಗಿ ಬೆರೆತ ದಂಪತಿಗಳು, ವಿದ್ಯಾರ್ಥಿಗಳೊಂದಿಗೆ ವಿನೋದವಾಗಿ ಕಾಲ ಕಳೆದರು. ಎಸ್‌ಎ ಪಿಯು ಕಾಲೇಜಿನ ಪ್ರಾಚಾರ್ಯ ವೈ.ಸಿ. ಪಾಟೀಲ ಕಾರ್ಟರ್ ದಂಪತಿಗಳಿಗೆ ಶಾಲೆ ನಡೆದು ಬಂದ ದಾರಿಯನ್ನು ವಿವರಿಸಿ, ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರು ವಿಕಲಚೇತನರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅವರು ಕಲಿಯುವಾಗ ಅನುಭವಿಸುತ್ತಿದ್ದ ಕಷ್ಟ-ಕಾರ್ಪಣ್ಯಗಳನ್ನು ಕಂಡು ಮರುಗಿದ ಅವರು ವಿಕಲಚೇತನರಿಗಾಗಿಯೇ ಒಂದು ವಸತಿಯುತ ಶಾಲೆಯನ್ನೇಕೆ ತೆರೆಯಬಾರದು ಎಂದು ಯೋಚಿಸಿ ಮುಂದಿಟ್ಟರು. ಇಂದು ಈ ಶಾಲೆ ಈ ಭಾಗದಲ್ಲಿ ಅತ್ಯಂತ ನೆಚ್ಚಿನ ಶಾಲೆಯಾಗಿದೆ. ಇಂದಿನ ಪೀಠಾಧಿಪತಿಗಳಾಗಿರುವ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ತಮ್ಮ ಗುರುಗಳ ಈ ಆಸೆಯನ್ನು ಜೀವಂತವಾಗಿರಿಸಿಕೊಡು ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆಯುತ್ತಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಗದಗಿನ ಉದ್ಯಮಿ ಸಾಯಿಕುಮಾರ, ಆನಂದ ಪೊತ್ನಿಸ್, ಸ್ನೇಹಾ ಖಟವಟೆ, ಶಿವಕುಮಾರ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ತಳಬಾಳ ವಿದ್ಯಾರ್ಥಿಗಳಿಗೆ ಚಾರ್ಟರ್ ದಂಪತಿಗಳ ಬಗ್ಗೆ ಹೇಳಿದರು. ಶಿಕ್ಷಕ ಬ್ರಹ್ಮಾನಂದ ಗಾಣಿಗೇರ ಸ್ವಾಗತಿಸಿದರು. ಸಂಸ್ಥೆಗೆ ಭೇಟಿ ನೀಡಿದ ಚಾರ್ಟರ್ ದಂಪತಿಗಳು ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಮತ್ತು ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಆತ್ಮೀಯವಾಗಿ ಬರಮಾಡಿಕೊಂಡರು. ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.


