ಮೈಸೂರು: ಅರಣ್ಯ ಇಲಾಖೆಯ ಕ್ಯಾಂಪ್ ಸಮೀಪ ಹರಿಯುತ್ತಿದ್ದ ಕಬಿನಿ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಅರಣ್ಯ ರಕ್ಷಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಬುಧವಾರ ನಡೆದಿದೆ.
ಹೆಚ್.ಡಿ. ಕೋಟೆ ತಾಲೂಕಿನ ಅಂಕನಾಥಪುರ ಗ್ರಾಮದ ನಿವಾಸಿ ಸುಪ್ರೀತ್ (36) ಮೃತ ದುರ್ಧೈವಿಯಾಗಿದ್ದು, ಎಂದಿನಂತೆ ಕರ್ತವ್ಯ ನಿರ್ವಹಿಸಿ, ರಾತ್ರಿ ಪಾಳಿಯ ಕೆಲಸ ಮುಗಿಸಿದ ನಂತರ ಬುಧವಾರ ಬೆಳಿಗ್ಗೆ ಸುಮಾರು 8 ಗಂಟೆಗೆ ಉದ್ಬೂರು ಗೇಟ್ ಸಮೀಪದ ಕಳ್ಳಬೇಟೆ ತಡೆ ಶಿಬಿರದ ಬಳಿ ತಮ್ಮ ಸಹೋದ್ಯೋಗಿಗಳಾದ ಅಯ್ಯಪ್ಪ ಮತ್ತು ಅಮನ್ ಜೊತೆ ಈಜಲು ತೆರಳಿದ್ದರು.
ಈಜಾಡುತ್ತಿದ್ದ ವೇಳೆ ಸುಪ್ರೀತ್ ಅವರಿಗೆ ಆಯಾಸವಾಗಿದ್ದು, ತಾವು ದಡಕ್ಕೆ ಮರಳುವುದಾಗಿ ಸಹೋದ್ಯೋಗಿಗಳಿಗೆ ತಿಳಿಸಿ ನೀರಿನಿಂದ ಹೊರಬರಲು ಯತ್ನಿಸಿದ್ದಾರೆ. ಆದರೆ ತೀವ್ರ ಆಯಾಸದಿಂದ ನೀರಿನಲ್ಲಿ ಮುಳುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹೋದ್ಯೋಗಿಗಳ ಕೂಗನ್ನು ಕೇಳಿದ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಆರಂಭಿಸಿದರು. ಆದರೆ ಪತ್ತೆಯಾಗದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.
ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ, ಸ್ಥಳೀಯ ನುರಿತ ಈಜುಗಾರರು ಹಾಗೂ ಕೇರಳದಿಂದ ಆಗಮಿಸಿದ ಮುಳುಗು ತಜ್ಞರ ತಂಡ ಶೋಧ ಕಾರ್ಯ ಕೈಗೊಂಡಿತ್ತು. ಗುರುವಾರ ಬೆಳಿಗ್ಗೆ ಸುಮಾರು 6 ಗಂಟೆಗೆ ಸುಪ್ರೀತ್ ಅವರ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.
ಮೃತರಿಗೆ ಇಬ್ಬರು ಚಿಕ್ಕ ಮಕ್ಕಳು ಇದ್ದು, ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು. ಈ ಕುರಿತು ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



