ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ದೇಶದಲ್ಲಿ ದೇಶದ್ರೋಹ ಪ್ರಕರಣ ಎದುರಿಸುತ್ತಿದ್ದು, ಇಂದು ತೀರ್ಪು ಪ್ರಕಟವಾಗಿದೆ. ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ದೋಷಿ ಎಂದು ತೀರ್ಪು ನೀಡಿದೆ. ಅದಲ್ಲದೆ 2024ರ ಹಿಂಸಾಚಾರದಲ್ಲಿ ಶೇಖ್ ಹಸೀನಾ ಅಪರಾಧಿ ಎಂಬುದಾಗಿ ಘೋಷಿಸಿದ್ದಂತ ಐಸಿಟಿಯು, ಇದೀಗ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ.
ತ್ರಿಸದಸ್ಯ ನ್ಯಾಯಪೀಠವು ಶೇಖ್ ಹಸೀನಾ ಅವರ ಮೇಲಿರುವ ಆರೋಪ ಸಾಬೀತಾಗಿದೆ ಎಂದು ಪ್ರಕಟಿಸಿದ್ದು, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಸೋಮವಾರ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದ ಮೇಲೆ ಶಿಕ್ಷೆ ವಿಧಿಸಲಾಯಿತು.
ಹಸೀನಾ ಮತ್ತು ಹಲವಾರು ಅವಾಮಿ ಲೀಗ್ ನಾಯಕರು ಕೊಲೆ, ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ. ಇಂದು ನೀಡಿದ ತೀರ್ಪು ಕಳೆದ ವರ್ಷದ ಜುಲೈ ದಂಗೆಗೆ ಸಂಬಂಧಿಸಿದ ಮಾನವೀಯತೆಯ ವಿರುದ್ಧದ ಐದು ಅಪರಾಧಗಳನ್ನು ಒಳಗೊಂಡಿದೆ.
ಈ ಆರೋಪಗಳಲ್ಲಿ ಹತ್ಯೆ, ಕೊಲೆ ಯತ್ನಗಳು, ಚಿತ್ರಹಿಂಸೆ, ನಿರಾಯುಧ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಮಾರಣಾಂತಿಕ ದಾಳಿ ಸೇರಿದಂತೆ ಹಲವು ಆರೋಪಗಳು ಮಾಜಿ ಪ್ರಧಾನಿ ಶೇಖ್ ಹಸೀನಾ, ಮಾಜಿ ಗೃಹ ಸಚಿವ ಅಸಾದುಜ್ಜಾಮಾನ್ ಖಾನ್ ಕಮಲ್ ಹಾಗೂ ಮಾಜಿ ಐಜಿಪಿ ಚೌಧರಿ ಅಬ್ದುಲ್ಲಾ ಅಲ್-ಮುಮುನ್ ವಿರುದ್ಧ ಪ್ರಕರಣಗಳು ದಾಖಲಾಗಿವೆ.



