HomeHaveriರಾಜ್ಯ ಸರ್ಕಾರದಿಂದ ರೈತರಿಗೆ ಅನ್ಯಾಯ : ಬಸವರಾಜ ಬೊಮ್ಮಾಯಿ

ರಾಜ್ಯ ಸರ್ಕಾರದಿಂದ ರೈತರಿಗೆ ಅನ್ಯಾಯ : ಬಸವರಾಜ ಬೊಮ್ಮಾಯಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ : ರಾಜ್ಯ ಸರಕಾರವು ಕೇಂದ್ರ ಸರಕಾರ ನೀಡಿದ ಬರ ಪರಿಹಾರದಲ್ಲಿ 2 ಸಾವಿರ ರೂ. ಕಡಿತ ಮಾಡಿ ನೀಡುತ್ತಿದ್ದು, ಬರ ಪರಿಹಾರವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿ ರೈತರಿಗೆ ದೊಡ್ಡ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಬರ ಪರಿಹಾರವಾಗಿ ಕೊಟ್ಟಿದ್ದೇ 2 ಸಾವಿರ. ಈಗ ಅದರಲ್ಲೂ ಕಡಿತ ಮಾಡಿ ರೈತರ ಖಾತೆಗೆ ಹಣ ನೀಡುತ್ತಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಪರಿಹಾರ ನೀಡಿರುವ ಹಣವನ್ನು ರೈತರ ಸಾಲಕ್ಕೆ ಹೊಂದಾಣಿಕೆ ಮಾಡುತ್ತಿದ್ದಾರೆ. ರೈತರು ಸಂಕಷ್ಟದಲ್ಲಿ ಇದ್ದಾರೆ ಎನ್ನುವ ಕಾರಣಕ್ಕೆ ಪರಿಹಾರ ನೀಡುವುದು. ಈಗ ಅದನ್ನೂ ಸಾಲಕ್ಕೆ ಹೊಂದಾಣಿಕೆ ಮಾಡಿದರೆ, ಅದು ಹೇಗೆ ಪರಿಹಾರವಾಗುತ್ತದೆ ಎಂದು ಪ್ರಶ್ನಿಸಿದರು.

Former Chief Minister Basavaraja Bommai

ರಾಜ್ಯ ಸರ್ಕಾರಕ್ಕೆ ರೈತರಿಗೆ ಸಹಾಯ ಮಾಡುವ ಮನಸಿದ್ದರೆ, ಕಾಂಗ್ರೆಸ್ ಚುನಾವಣಾ ಘೋಷಣಾ ಪತ್ರದಲ್ಲಿ ಹೇಳಿರುವಂತೆ ರೈತರ ಸಾಲ ಮನ್ನಾ ಮಾಡಲಿ, ಕಾಂಗ್ರೆಸ್ ಘೋಷಣಾ ಪತ್ರ ಕರ್ನಾಟಕದಿಂದ ಪ್ರಾರಂಭವಾಗಲಿ ಎಂದು ಆಗ್ರಹಿಸಿದರು.

ಇನ್ನು ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಹತ್ಯೆಯಾಗಿರುವ ಪ್ರಕರಣದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದ್ದಕ್ಕೆ ಇಂತಹ ಘಟನೆಗಳೇ ಸಾಕ್ಷಿಯಾಗಿವೆ. ಇಂತಹ ಹೇಯ ಕೃತ್ಯ ಯಾರೇ ಮಾಡಿರಲಿ ಅವರನ್ನು ತಂದು ಗಲ್ಲಿಗೇರಿಸಿ, ಶಿಕ್ಷೆ ಕೊಡಿಸಿ. ಹಾಡಹಗಲೇ ಇಂತಹ ಘೋರ ಕೃತ್ಯ ನಡೆದರೂ ಪೊಲೀಸರು ರಾಜಕಾರಣದ ಪ್ರಕರಣಗಳು, ಜಾತಿನಿಂದನೆ ಪ್ರಕರಣಗಳನ್ನು ದಾಖಲಿಸುವುದು, ಕ್ಲಬ್ ನಡೆಸುವುದರಲ್ಲಿಯೇ ಮಗ್ನರಾಗಿದ್ದಾರೆಯೇ ಹೊರತು ಈ ರೀತಿಯಲ್ಲಿ ಕೊಲೆ, ಅತ್ಯಾಚಾರಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇಂತಹ ಹೇಯ ಕೃತ್ಯಗಳಲ್ಲಿ ರಾಜ್ಯ ಸರಕಾರವೇ ಮುಂದೆ ನಿಂತು ಕುಮ್ಮಕ್ಕು ನೀಡುವುದನ್ನು ನಾನು ಎಂದೂ ನೋಡಿರಲಿಲ್ಲ. ಇದೊಂದು ಜನವಿರೋಧಿ ಸರಕಾರ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ರೈತರಿಗೆ ಎರಡು ಪಟ್ಟು ಪರಿಹಾರ ನೀಡಿದ್ದೆವು. ಇವರು ಪರಿಹಾರವಾಗಿ ಕೊಟ್ಟಿರುವುದೇ 2 ಸಾವಿರ ರೂಪಾಯಿ, ಅದನ್ನೂ ಕಡಿತಗೊಳಿಸಿ ರೈತರಿಗೆ ನೀಡುತ್ತಿರುವುದು ಘೋರ ಅನ್ಯಾಯವಾಗಿದೆ. ಈ ಪ್ರಮಾದವನ್ನು ರಾಜ್ಯ ಸರ್ಕಾರ ತಕ್ಷಣವೇ ಸರಿಪಡಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!