ಯುವ ಪೀಳಿಗೆ ಆಧ್ಯಾತ್ಮಿಕ ಚಿಂತನೆ ಮೈಗೂಡಿಸಿಕೊಳ್ಳಬೇಕು

0
Akkana Balaga's 50th Golden Anniversary Celebration
Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ (ಸವಣೂರು) : ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಭಕ್ತಿಯ ಕ್ರಾಂತಿ ನಿರಂತರವಾಗಿ ನಡೆದಿರುವುದು ಭಾರತ ದೇಶದಲ್ಲಿ, ಅದೂ ಕನ್ನಡ ನಾಡಿನಲ್ಲಿ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಬುಧವಾರ ಸವಣೂರು ಪಟ್ಟಣದ ಶ್ರೀ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಅಕ್ಕನ ಬಳಗದ 50ನೇ ವರ್ಷದ ಸುವರ್ಣ ಸಂಭ್ರಮ ಸಮಾರಂಭದಲ್ಲಿ ‘ಸುವರ್ಣ ಸಂಭ್ರಮ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವೈಚಾರಿಕವಾಗಿ ಮುಂಬರುವ ಯುವ ಪೀಳಿಗೆ ಜ್ಞಾನದ ಮೂಲಕ ಆಧ್ಯಾತ್ಮಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳುವದು ಅವಶ್ಯವಾಗಿದೆ. ಸವಣೂರಿನ ಅಕ್ಕನ ಬಳಗ ಕ್ರಿಯಾಶೀಲವಾಗಿ 50 ವರ್ಷಗಳ ಕಾಲ ಕೆಲಸ ಮಾಡಿಕೊಂಡು ಬಂದಿದೆ ಎಂದರು.

ಶುದ್ಧ ಅಂತಃಕರಣ, ಭಕ್ತಿಯ ಭಾವ ಅಕ್ಕ ಮಹಾದೇವಿಯವರ ವಚನದಲ್ಲಿದೆ. ಯಾವುದನ್ನೂ ಬಯಸದೇ ಶುದ್ಧ ಅಂತಃಕರಣದಲ್ಲಿ ಲೀನವಾಗಿ ಕರಗಿರುವ ಶರಣೆ ಅಕ್ಕಮಹಾದೇವಿ. ಅಂತಹ ಶರಣರು ನಡೆದಾಡಿದ ಪುಣ್ಯ ಭೂಮಿಯಲ್ಲಿ ಜನಿಸಿದ ನಾವೇ ಧನ್ಯರು. ನಮ್ಮ ಸಂಸ್ಕೃತಿ, ಸಂಸ್ಕಾರದ ಮೌಲ್ಯಗಳು ನಮ್ಮ ಪರಿವಾರದಲ್ಲಿ ಉಳಿದುಕೊಂಡಿವೆ ಎಂದರೆ ಅದು ತಾಯಂದಿರಿಂದ. ತಾಯಂದಿರು ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಭಕ್ತಿಯ ಭಾವ, ಮಠಗಳ ಪಾತ್ರದಿಂದ ಕನ್ನಡ ನಾಡಿನಲ್ಲಿ ಇಂದು ಸದ್ಭಾವನಾ, ಸದ್ವಿಚಾರದ ಸಂಸ್ಕಾರದಿಂದ ಇರಲು ಸಾಧ್ಯವಾಗಿದೆ. ಇವುಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ಸಮಾರಂಭದ ಉದ್ಘಾಟನೆಯನ್ನು ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ್ ಜ್ಯೋತಿ ಬೆಳಗಿಸುವ ಮೂಲಕ ನೆರವೇರಿಸಿ ಮಾತನಾಡಿದರು. ಚನ್ನಮ್ಮ ಬೊಮ್ಮಾಯಿ ‘ಅಕ್ಕನ ವಚನಗಳು’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕಲ್ಮಠದ ಮಹಾಂತ ಸ್ವಾಮೀಜಿ, ಅಡವಿಸ್ವಾಮಿಮಠದ ಕುಮಾರ ಸ್ವಾಮೀಜಿ, ಸದಾಶಿವಪೇಟೆ ವಿರಕ್ತಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಆಶೀರ್ವಚನ ನೀಡಿದರು.

ಅಕ್ಕನ ಬಳಗದ ಅಧ್ಯಕ್ಷೆ ಕವಿತಾ ಬಡಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ದಂಪತಿಯನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ರಾಜಶೇಖರ ಸಿಂಧೂರ ಅವರ ಪತ್ನಿ ಅಲಕಾ ಸಿಂಧೂರ ಅವರಿಗೆ ಅಕ್ಕನ ಬಳಗದ ವತಿಯಿಂದ ‘ತ್ರಿವಿಧ ದಾಸೋಹ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಅಕ್ಕನಬಳಗದ ಶರಣೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಧಾರವಾಡದ ಯುವ ವಾಗ್ಮಿ ಐಶ್ವರ್ಯ ಸೋಲಾರಗೊಪ್ಪ ಕಾರ್ಯಕ್ರಮ ನಿರ್ವಹಿಸಿದರು.

ನಾನು ಎಂಪಿ ಆಗಲಿ, ಆಗದೆ ಇರಲಿ, ಶಾಸಕ ಇರಲಿ, ಇರದೇ ಇರಲಿ. ಸವಣೂರ-ಶಿಗ್ಗಾವಿ ಜನತೆಯ ಸೇವೆಯನ್ನು ನಿರಂತರವಾಗಿ ಮಾಡುತ್ತೇನೆ. ನನಗೆ ಸ್ಥಾನಕ್ಕಿಂತ ಕಳೆದ 16 ವರ್ಷ ನೀಡಿದ ನಿಮ್ಮ ಪ್ರೀತಿ-ವಿಶ್ವಾಸ ನನ್ನ ಜೀವನದಲ್ಲಿ ಅತ್ಯಂತ ಮಹತ್ವದ ದಿನಗಳಾಗಿವೆ ಎಂಬುದನ್ನು ನಾನೆಂದೂ ಮರೆಯುವದಿಲ್ಲ.
– ಬಸವರಾಜ ಬೊಮ್ಮಾಯಿ.
ಮಾಜಿ ಮುಖ್ಯಮಂತ್ರಿ.


Spread the love

LEAVE A REPLY

Please enter your comment!
Please enter your name here