ಚಾಮರಾಜನಗರ: ಮಾಜಿ ಸಿಎಂ ಎಸ್.ಎಂ ಕೃಷ್ಣ ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇವರ ಚಿಕಿತ್ಸೆ ಫಲಿಸದೇ ಸದಾಶಿವನಗರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಾಜ್ಯಕ್ಕೆ ಮತ್ತೊಂದು ಆಘಾತ ಉಂಟಾಗಿದೆ.
ಕೊಳ್ಳೇಗಾಲದ ಮಾಜಿ ಶಾಸಕ ಎಸ್ ಜಯಣ್ಣ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬುಧವಾರ ಗೃಹ ಪ್ರವೇಶ ಹಿನ್ನೆಲೆ ಆಹ್ವಾನ ಪತ್ರಿಕೆ ಕೊಡಲು ಮೈಸೂರಿಗೆ ತೆರಳುತ್ತಿದ್ದ ವೇಳೆ ಕೋಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಬಳಿ ಜಯಣ್ಣ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಕಾರಿನಲ್ಲಿ ಹೋಗುತ್ತಿದ್ದ ವೇಳೆ ಏಕಾಏಕಿ ಕೆಮ್ಮು ಹಾಗೂ ಎದೆನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ಕರೆತರುವ ಮುನ್ನ ಮಾರ್ಗಮಧ್ಯೆ ಜಯಣ್ಣ ಕೊನೆಯುಸಿರೆಳೆದಿದ್ದಾರೆ.
ಸಣ್ಣಯ್ಯ, ಪುಟ್ಟನಂಜಮ್ಮ ದಂಪತಿಯ ಸುಪುತ್ರನಾದ ಜಯಣ್ಣ 1952ರ ಸೆ.9ರಂದು ಜನಿಸಿದರು. 72 ವಯಸ್ಸಿನ ಜಯಣ್ಣ ರಾಜ್ಯ ಸರ್ಕಾರ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. ಜಯಣ್ಣ ಎರಡು ಬಾರಿ ಶಾಸಕರಾಗಿದ್ದರು. ಅನಾರೋಗ್ಯದ ಹಿನ್ನೆಲೆ 2018ರಲ್ಲಿ ಟಿಕೆಟ್ ಕೊಟ್ಟಿರಲಿಲ್ಲ. 1999ರಲ್ಲಿ ಜೆಡಿಎಸ್‌ನಿಂದ ಹಾಗೂ 2013ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೇ ಸಿಎಂ ಸಿದ್ದರಾಮಯ್ಯನವರ ಆಪ್ತರಾಗಿದ್ದರು. ಜಯಣ್ಣ ಅವರ ಅಂತ್ಯಕ್ರಿಯೆ ಬುಧವಾರ ಮಾಂಬಳ್ಳಿ ಗ್ರಾಮದಲ್ಲಿ ನಡೆಯಲಿದೆ.