ಬೆಂಗಳೂರು:- ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೈಲುವಾಸ ಮುಂದುವರಿದಿದೆ.
ಹಾಸನದ ಹೊಳೆನರಸೀಪುರದ ಮನೆಯ ಕೆಲಸದಾಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್, ಆ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಇಂದು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯಿತು.
ಪ್ರಜ್ವಲ್ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದರು. ಅವರು, “ಪ್ರಾಸಿಕ್ಯೂಷನ್ ನೀಡಿರುವ ಸಾಕ್ಷ್ಯಗಳಲ್ಲಿ ಪರಸ್ಪರ ಹೊಂದಾಣಿಕೆಯಿಲ್ಲ. ಪ್ರಜ್ವಲ್ ತಪ್ಪಿತಸ್ಥನೆಂದು ತೋರಿಸಲು ಯಾವುದೇ ನಿಖರ ಸಾಕ್ಷ್ಯಗಳಿಲ್ಲ. ಘಟನೆ ನಡೆದ ನಾಲ್ಕು ವರ್ಷಗಳ ನಂತರ ದೂರು ದಾಖಲಿಸಲಾಗಿದೆ. ವಿಶ್ವಾಸಾರ್ಹತೆ ಇಲ್ಲದ ವಿಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಲಾಗಿದೆ. ಘಟನೆ ನಡೆದ ಫಾರ್ಮ್‌ಹೌಸ್‌ನ ಮಾಲೀಕರ ಹೇಳಿಕೆ, ಅಲ್ಲಿದ್ದವರ ಹೇಳಿಕೆ, ಸಂತ್ರಸ್ತೆಯ ಮೊಬೈಲ್ ಸಿಡಿಆರ್ ಮತ್ತು ಬಟ್ಟೆಗಳ ವಶಪಡಿಕೆ ಪ್ರಕ್ರಿಯೆಯಲ್ಲೂ ಅನುಮಾನಗಳಿವೆ” ಎಂದು ವಾದಿಸಿದರು.
ಅವರು, “ವಿಚಾರಣಾಧೀನ ನ್ಯಾಯಾಲಯವು ನಮ್ಮ ವಾದಗಳನ್ನು ಸಮರ್ಪಕವಾಗಿ ಪರಿಗಣಿಸದೇ ಗರಿಷ್ಠ ಶಿಕ್ಷೆ ವಿಧಿಸಿದೆ. ಆದ್ದರಿಂದ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡಬೇಕು” ಎಂದು ಮನವಿ ಮಾಡಿದರು. ಆದರೆ ಹೈಕೋರ್ಟ್ ಇಂದು ಜಾಮೀನು ನೀಡದೇ, ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 24ಕ್ಕೆ ಮುಂದೂಡಿದೆ. ಆ ದಿನ ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಲಿದ್ದಾರೆ. ಈ ವಿಚಾರಣೆಯನ್ನು ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯಕ್ ಅವರ ಪೀಠ ಮುಂದುವರೆಸಿತು. ಹೀಗಾಗಿ ಪ್ರಜ್ವಲ್ ರೇವಣ್ಣ ಅವರು ಇನ್ನೂ ಕೆಲವು ದಿನ ಜೈಲಲ್ಲೇ ಉಳಿಯಬೇಕಾಗಿದೆ.


