ನವದೆಹಲಿ: ಭಾರತದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಬೆಳಗಿನ ವಾಕಿಂಗ್ ವೇಳೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದು, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

75 ವರ್ಷದ ಧನಕರ್ ಅವರನ್ನು ಆಸ್ಪತ್ರೆಯ ಕಾರ್ಡಿಯೋ-ನ್ಯೂರೋ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಹೃದ್ರೋಗ ವಿಭಾಗದ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಅವರ ಆರೋಗ್ಯ ಸ್ಥಿತಿಯ ಕುರಿತು ಆಸ್ಪತ್ರೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಬುಧವಾರ ಬೆಳಗ್ಗೆ ವಾಕಿಂಗ್ ಮಾಡುವಾಗ ಧನಕರ್ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೆಲವು ನಿಮಿಷಗಳ ಕಾಲ ಪ್ರಜ್ಞಾಹೀನರಾಗಿದ್ದರು ಎನ್ನಲಾಗಿದೆ. ತಕ್ಷಣ ಅವರ ಭದ್ರತಾ ಸಿಬ್ಬಂದಿ ಪಿಸಿಆರ್ ವಾಹನದಲ್ಲಿ ಅವರನ್ನು ಮನೆಗೆ ಕರೆದೊಯ್ದಿದ್ದರು. ಬಳಿಕ ವೈದ್ಯಕೀಯ ತಂಡಗಳು ಪ್ರಾಥಮಿಕ ಚಿಕಿತ್ಸೆ ನೀಡಿದವು. ನಂತರ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಂಬುಲೆನ್ಸ್ ಮೂಲಕ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಧನಕರ್ ಅವರು 2022ರ ಆಗಸ್ಟ್ನಿಂದ 2025ರ ಜುಲೈ 21ರವರೆಗೆ ಭಾರತದ 14ನೇ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. 2025ರ ಜುಲೈ 21ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕಳೆದ ಎರಡು ವರ್ಷಗಳಲ್ಲಿ ಧನಕರ್ ಅವರು ಹಲವು ಬಾರಿ ಪ್ರಜ್ಞೆ ತಪ್ಪಿ ಬಿದ್ದ ಘಟನೆಗಳು ವರದಿಯಾಗಿವೆ. 2025ರ ಮಾರ್ಚ್ನಲ್ಲಿ ಎದೆನೋವಿನ ಹಿನ್ನೆಲೆಯಲ್ಲಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿತ್ತು.
ಅದೇ ವರ್ಷದ ಜೂನ್ನಲ್ಲಿ ನೈನಿತಾಲ್ನಲ್ಲಿ ನಡೆದ ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಂಸದೀಯ ಸಹೋದ್ಯೋಗಿ ಮಹೇಂದ್ರ ಸಿಂಗ್ ಪಾಲ್ ಅವರನ್ನು ಆಲಿಂಗನ ಮಾಡುವ ಸಂದರ್ಭದಲ್ಲಿ ಅವರು ಪ್ರಜ್ಞೆ ತಪ್ಪಿದ್ದರು ಎನ್ನಲಾಗಿದೆ. ಜನವರಿಯಲ್ಲಿ ಮನೆಯ ಶೌಚಾಲಯಕ್ಕೆ ತೆರಳುವಾಗಲೂ ಎರಡು ಬಾರಿ ಕುಸಿದು ಬಿದ್ದಿದ್ದರು ಎಂದು ವರದಿಯಾಗಿದೆ.










