ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮದ ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡ ಹಾಗೂ ಮೂಲಸೌಕರ್ಯಗಳ ನಿರ್ಮಾಣವಲ್ಲ, ಜನರಲ್ಲಿ ಪ್ರೀತಿ, ಸಹಕಾರ, ಸಾಮರಸ್ಯ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವುದೂ ನಿಜವಾದ ಅಭಿವೃದ್ಧಿಯ ಭಾಗವಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗುಂಡೇಶ್ವರ ಸಮುದಾಯ ಭವನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಗಳ ಅಭಿವೃದ್ಧಿಯು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಕೃಷಿಯನ್ನೇ ಬದುಕಾಗಿಸಿಕೊಂಡಿರುವ ಗ್ರಾಮೀಣ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ, ಧರ್ಮನಿಷ್ಠೆ ಹಾಗೂ ಮಾನವೀಯ ಮೌಲ್ಯಗಳನ್ನು ನೀಡಬೇಕು ಎಂದು ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಜಗದ್ಗುರುಗಳು ಆಶೀರ್ವಚನ ನೀಡಿದರು.
ಸಮುದಾಯ ಭವನವು ಗ್ರಾಮದ ಸಾಮಾಜಿಕ ಬದುಕಿನ ಕೇಂದ್ರವಾಗಿ ರೂಪುಗೊಳ್ಳಬೇಕು. ಎಲ್ಲ ಸಮುದಾಯದವರು ಭವನವನ್ನು ಸಮಾನವಾಗಿ ಬಳಸಿಕೊಂಡು ಸೌಹಾರ್ದತೆ ಹಾಗೂ ಸಹಬಾಳ್ವೆಗೆ ಮಾದರಿಯಾಗಬೇಕು ಎಂದು ಹೇಳಿದರು.
ಇಂದು ತಂತ್ರಜ್ಞಾನ, ಸಂಪರ್ಕ ಸಾಧನಗಳು, ರಾಜಕೀಯ ಸೇರಿದಂತೆ ವಿವಿಧ ಕಾರಣಗಳಿಂದ ಸಮಾಜದಲ್ಲಿ ಸೌಹಾರ್ದತೆ ಹಾಗೂ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಎಲ್ಲ ಜಾತಿ-ಜನಾಂಗದವರು ಸಹೋದರತ್ವದ ಭಾವನೆಯಿಂದ ಬದುಕು ಸಾಗಿಸುತ್ತಿರುವ ಪರಂಪರೆ ಇಂದಿಗೂ ಜೀವಂತವಾಗಿದ್ದು, ಅದು ಮುಂದುವರಿಯಬೇಕು ಎಂದರು.
ದೇವರು, ಧರ್ಮ, ಶಿಕ್ಷಣ ಹಾಗೂ ಸಮಾಜಕ್ಕಾಗಿ ನಿತ್ಯದ ಬದುಕಿನಲ್ಲಿ ಕೈಲಾದಷ್ಟು ಸಹಾಯ-ಸಹಕಾರ ಮಾಡುವ ಮೂಲಕವೇ ಬದುಕಿಗೆ ಸಾರ್ಥಕತೆ ದೊರೆಯುತ್ತದೆ ಎಂದು ಜಗದ್ಗುರುಗಳು ತಿಳಿಸಿದರು.
ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ ಹಾಗೂ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಯಾವುದೇ ಗ್ರಾಮದ ಪ್ರಗತಿಗೆ ಸರ್ಕಾರದ ಯೋಜನೆಗಳ ಜತೆಗೆ ಸ್ಥಳೀಯ ಜನರ ಸಹಕಾರ ಹಾಗೂ ಸಂಘಟಿತ ಪ್ರಯತ್ನವೂ ಅಗತ್ಯವಾಗಿದೆ. ಗ್ರಾಮಸ್ಥರ ಸಹಭಾಗಿತ್ವದಿಂದ ನಿರ್ಮಾಣಗೊಂಡಿರುವ ಇಂತಹ ಜನೋಪಯೋಗಿ ಕಟ್ಟಡಗಳು ಮುಂದಿನ ಪೀಳಿಗೆಗೂ ಪ್ರಯೋಜನಕಾರಿಯಾಗಲಿವೆ ಎಂದರು.
ಭವನ ನಿರ್ಮಾಣಕ್ಕೆ ಶ್ರಮಿಸಿದ ಶ್ರೀ ಗುಂಡೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ, ಗುರುಹಿರಿಯರು, ದಾನಿಗಳು ಹಾಗೂ ಗ್ರಾಮಸ್ಥರ ಕಾರ್ಯವನ್ನು ಗಣ್ಯರು ಶ್ಲಾಘಿಸಿದರು.
ಶ್ರೀ ಗುಂಡೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಗುಂಡಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಟಿ. ಈಶ್ವರ, ಸುನೀಲ ಮಹಾಂತಶೆಟ್ಟರ, ಈರಪ್ಪ ಶಿಗ್ಲಿ, ಬೂದನಗೌಡ ನಿಂಗನಗೌಡ್ರ, ಜೋಗೆಪ್ಪ ಶಿರಬಡಗಿ, ಮೃತ್ಯುಂಜಯ ಹಿರೇಮಠ, ಫಕೀರೇಶ ಜವಳಿ, ವಿರೂಪಾಕ್ಷ ಮೇಟಿ, ಎಸ್.ಜಿ. ಪಾಟೀಲ, ಎಸ್.ಜಿ. ಕಲ್ಮೇಶ್ವರಮಠ, ಜಿ.ಬಿ. ಪೂಜಾರ, ವಿ.ಜಿ. ಪಾಟೀಲ, ಆರ್.ಬಿ. ಮಲ್ಲರಡ್ಡಿ, ಆರ್.ಎಸ್. ನಿಂಗನಗೌಡ್ರ, ವಿಶ್ವನಾಥ ಚಿಂಚಲಿ, ಸಿ.ಬಿ. ಪಾಟೀಲ ಸೇರಿದಂತೆ ಶ್ರೀ ಗುಂಡೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಸದಸ್ಯರು, ಗ್ರಾಮದ ಗುರುಹಿರಿಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಂಗವಾಗಿ ಮುಂಡರಗಿಯ ಕರ್ನಾಟಕ ಜಾನಪದ ಕಲಾ ಸಂಘದಿಂದ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಿತು. ಜಾನಪದ ಕಲಾವಿದರು ವಿವಿಧ ಕಲಾ ಪ್ರಕಾರಗಳ ಮೂಲಕ ಗ್ರಾಮೀಣ ಸಂಸ್ಕೃತಿ, ಪರಂಪರೆ ಹಾಗೂ ಜನಜೀವನವನ್ನು ಅನಾವರಣಗೊಳಿಸಿದರು. ಜಾನಪದ ಗೀತೆ, ನೃತ್ಯ ಹಾಗೂ ವಿವಿಧ ಕಲಾ ಪ್ರದರ್ಶನಗಳು ಕಾರ್ಯಕ್ರಮಕ್ಕೆ ಮೆರುಗು ತಂದವು.
ಗ್ರಾಮದ ಅಭಿವೃದ್ಧಿ ಎಂದರೆ ಕೇವಲ ರಸ್ತೆ ಮತ್ತು ಕಟ್ಟಡಗಳ ನಿರ್ಮಾಣವಲ್ಲ. ಜನರ ನಡುವೆ ಪ್ರೀತಿ, ಸಹಕಾರ, ಸಾಮರಸ್ಯ ಮತ್ತು ಸಾಮಾಜಿಕ ಪ್ರಜ್ಞೆ ಬೆಳೆಯಬೇಕು. ಸಮುದಾಯ ಭವನಗಳು ಎಲ್ಲ ವರ್ಗದ ಜನರನ್ನು ಒಂದುಗೂಡಿಸುವ ಕೇಂದ್ರಗಳಾಗಿ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ವೇದಿಕೆಗಳಾಗಿ ರೂಪುಗೊಳ್ಳಬೇಕು.
– ಜಿ.ಎಸ್. ಪಾಟೀಲ, ವಿಧಾನಸಭೆ ಸಭಾಧ್ಯಕ್ಷರು



