ಬೆಂಗಳೂರು: ಶಾಸಕರ ಹೆಸರಿನಲ್ಲಿ ನಕಲಿ ಸಹಿ, ನಕಲಿ ಲೆಟರ್ ಹೆಡ್ ಸೃಷ್ಟಿ ಕೆಲಸ ಪಡೆದ ಆರೋಪ ಮೇಲೆ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಮನಗರದ ಸ್ವಾಮಿ(35), ಅಂಜನ್ ಕುಮಾರ್(28) ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ಸ್ವಾಮಿ ಪತ್ನಿ ವಿನುತಾಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಹಿಂದೆ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದ ಸ್ವಾಮಿಕೆಲಸ ತೊರೆದು ರಾಜಕಾರಣಿಗಳ ಒಡನಾಟ ಬೆಳೆಸಿಕೊಂಡಿದ್ದನು.
ಶಾಸಕ ಶಾಮನೂರು ಶಿವಶಂಕರಪ್ಪ ಸಹಿ ನಕಲಿ ಮಾಡಿ ನಕಲಿ ಲೆಟರ್ ಹೆಡ್ ಸೃಷ್ಟಿಸಿದ್ದ. ಆರೋಪಿ ಸ್ವಾಮಿ ವಿಧಾನಸಭಾ ಸಚಿವಾಲಯಕ್ಕೆ ಪತ್ರ ಬರೆದು ವಿನುತಾ, ಅಂಜನ್ ಎಂಬುವವರಿಗೆ ಶಾಸಕರ ಆಪ್ತ ಸಹಾಯಕರ ಹುದ್ದೆ ಕೊಡಿಸಿದ್ದ. ಲೆಟರ್ ಹೆಡ್ ಬಳಸಿ ಪತ್ನಿ ವಿನುತಾಗೆ ಶಿವಶಂಕರಪ್ಪ ಆಪ್ತ ಸಹಾಯಕಿಯಾಗಿ ನೇಮಿಸಲು ಶಿಫಾರಸ್ಸು ಮಾಡಲಾಗಿತ್ತು. ವಿಧಾನಸಭಾ ಸಚಿವಾಲಯ ಸಿಬ್ಬಂದಿ ಈ ನಕಲಿ ಲೆಟರ್ ಹೆಡ್ ನಂಬಿ ವಿನುತಾಗೆ 2023ರ ಮೇ ನಲ್ಲಿ ಕೆಲಸ ನೀಡಿದ್ದರು. ಬಳಿಕ ಕೆಲಸಕ್ಕೆ ಬಾರದೆ ಪ್ರತಿ ತಿಂಗಳು 30 ಸಾವಿರ ಸಂಬಳವನ್ನು ವಿನುತಾ ಪಡೆದಿದ್ದಳು.
ಆನಂತರ ಗರ್ಭಿಣಿಯಾದ ಬಳಿಕ ಕೆಲಸದಿಂದ ಬಿಡುಗಡೆಗೊಳಿಸಲು ವಿನುತಾ ಪತ್ರ ಬರೆದಿದ್ದಳು. ಇದರ ಬಗ್ಗೆ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಅಧಿಕಾರಿಗಳು ವಂಚನೆ ಬಗ್ಗೆ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಶಾಸಕ ಎಸ್.ರಘು ಹೆಸರಿನಲ್ಲೂ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಶಾಸಕ ರಘು ಹೆಸರಿನಲ್ಲಿ ನಕಲಿ ಲೆಟರ್ ಸೃಷ್ಟಿಸಿ ಅಂಜನ್ ಕುಮಾರ್ ಎಂಬಾತನಿಗೆ ಕೆಲಸ ಕೊಡಿಸಿದ್ದ. ಸದ್ಯ ಇಬ್ಬರನ್ನೂ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.