ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಗ್ರಾಮೀಣ ಭಾಗದಲ್ಲಿ ಆಗಾಗ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವುದರಿಂದಲೇ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗುತ್ತಿದೆ ಎಂದು ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದ ಶ್ರೀ ಅನ್ನದಾನೇಶ್ವರ ಶಾಖಾ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ 11 ಜೋಡಿ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಠ- ಮಾನ್ಯಗಳಲ್ಲಿ ನಿರಂತರ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ. ಮಾನವೀಯ ಮೌಲ್ಯಗಳೊಂದಿಗೆ ತೃಪ್ತಿದಾಯಕ ಜೀವನ ನಡೆಸಲು ಸಾಧ್ಯ. ಶರಣರ ಸಂಗವು ಆತ್ಮಕಲ್ಯಾಣಕ್ಕೆ ದಾರಿಯಾಗುವುದು. ಭಕ್ತರ ಉದ್ಧಾರಕ್ಕೆ ಗುರುಕರುಣೆ ಮತ್ತು ಉತ್ತಮ ಸಂಸ್ಕಾರಗಳು ಅಗತ್ಯ. ಸ್ವಾರ್ಥ ರಹಿತ ಮತ್ತು ತ್ಯಾಗ ಸಹಿತ ಕಾಯಕದಿಂದ ಜೀವನದಲ್ಲಿ ಶಾಂತಿ ನೆಲೆಸುತ್ತದೆ. ಸತ್ಯ ಶುದ್ಧ ಕಾಯಕದಿಂದ ಹಣ ಗಳಿಸಿ. ಮನುಷ್ಯ ಆಡಂಬರದ ಬೆನ್ನು ಹತ್ತಿ ಹಾಳಾಗುತ್ತಿದ್ದಾನೆ.
ಮನುಷ್ಯನಿಗೆ ಶಾಂತಿ- ನೆಮ್ಮದಿ ಆಧ್ಯಾತ್ಮದಲ್ಲಿ ಮಾತ್ರ ಸಿಗುತ್ತದೆ. ಜಗತ್ತಿನಲ್ಲಿ ಎಲ್ಲರೂ ಹಣ ಗಳಿಸುತ್ತಾರೆ. ಸತ್ಯ ಶುದ್ಧ ಕಾಯಕ ಮಾಡಿ ಹಣ ಗಳಿಸಿದಾಗ ಮಾತ್ರ ಶಾಂತಿ, ನೆಮ್ಮದಿಯಿಂದ ಇರಬಹುದು ಎಂದರು.
ಬೆಳಗ್ಗೆ 5 ಗಂಟೆಗೆ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ನಡೆಯಿತು. ವಟುಗಳಿಗೆ ಅಯ್ಯಾಚಾರ ಮತ್ತು ಶಿವದೀಕ್ಷೆ ನೆರವೇರಿತು. ಶ್ರೀಮಠದ ಭಕ್ತಾದಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಬಸವರಾಜ ಪಲ್ಲೇದ ನಿರ್ವಹಿಸಿದರು.