ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸೀಗಿ ಹುಣ್ಣಿಮೆ ಹಬ್ಬ ಎಂದರೆ ಉತ್ತರ ಕರ್ನಾಟಕದ ರೈತರ ಕುಟುಂಬಗಳಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿರುತ್ತದೆ. ಬಿದಿರಿನ ಬುಟ್ಟಿಯಲ್ಲಿ ವಿವಿಧ ಖಾದ್ಯ, ತಿಂಡಿ-ತಿನಿಸು, ಪೂಜಾ ಸಾಮಗ್ರಿ ಇಟ್ಟುಕೊಂಡು ರೈತರು ಚಕ್ಕಡಿಯಲ್ಲಿ, ಟ್ರ್ಯಾಕ್ಟರ್‌ಗಳಲ್ಲಿ ಸಾಗುತ್ತಾರೆ.
ಸತತ ಮೂರು ವರ್ಷದಿಂದ ರೈತರು ಸಂಕಷ್ಟದಲ್ಲಿದ್ದರೂ ಸಹ ಪ್ರತಿ ವರ್ಷದಂತೆಯೇ ಸೀಗಿ ಹುಣ್ಣಿಮೆಯನ್ನು ರೈತರು ತಮ್ಮ ತಮ್ಮ ಹೊಲ-ಗದ್ದೆಗಳಿಗೆ ತೆರಳಿ ಬನ್ನಿ ಮರ ಹಾಗೂ ಪಂಚ ಪಾಂಡವರ ಕಲ್ಲುಗಳ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಬನ್ನಿ ಮರಕ್ಕೆ ಸೀರೆ ಉಡಿಸಿ ಉಡಿ ತುಂಬಿ ಚರಗ ಚೆಲ್ಲಿದರು. ರೈತ ಮಹಿಳೆಯರು, ಮಕ್ಕಳು ಹೊಸ ಬಟ್ಟೆ ತೊಟ್ಟು, ವಿಶೇಷ ಭೋಜನಗಳನ್ನು ತಯಾರಿಸಿ ಎಲ್ಲರೂ ಸೇರಿ ಭೋಜನ ಮಾಡಿ ಸಂಭ್ರಮದಿಂದ ಸೀಗಿ ಹುಣ್ಣಿಮೆ ಆಚರಿಸಿದರು.



