ಗದಗ:- ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಹರ್ತಿ ಗ್ರಾಮದ ಬಳಿ ಶನಿವಾರ ರಾತ್ರಿ ಜರುಗಿದೆ.
Advertisement
ಮೃತರನ್ನು ಗದಗನ ರಾಧಾಕೃಷ್ಣ ನಗರದ ನಿವಾಸಿಗಳಾದ ಬಸವರಾಜ್ ತಂದೆ ಚಿಂತಪ್ಪ ಕಮ್ಮಾರ (38) ಹಾಗೂ ಮೂಲತಃ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಕಿತ್ತಲಿ ಗ್ರಾಮದ ಪ್ರಶಾಂತ ತಂದೆ ಸುರೇಶ್ ಕಂಬಾರ (23) ಎಂದು ಗುರುತಿಸಲಾಗಿದೆ. ಮುಳಗುಂದ ಪಟ್ಟಣದ ಸಂಬಂಧಿಕರ ಮನೆಗೆ ಭೇಟಿ ನೀಡಿ, ಮದುವೆ ಆಮಂತ್ರಣ ನೀಡಿ ವಾಪಸ್ಸು ಬರುತ್ತಿರುವ ವೇಳೆ ಅಪಘಾತ ಸಂಭವಿಸಿದೆ.
ಬೈಕ್ ನಿಯಂತ್ರಣ ತಪ್ಪಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿರಬಹುದು ಎಂಬ ಅನುಮಾನ ಪೊಲೀಸರಿಂದ ವ್ಯಕ್ತವಾಗಿದೆ. ಘಟನೆ ಸ್ಥಳಕ್ಕೆ ಗದಗ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


