ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗ್ರಾಮ ಪಂಚಾಯತ್ ಆಡಳಿತ, ಆರ್ಥಿಕ ಪಾರದರ್ಶಕತೆ, ವಿಕೇಂದ್ರೀಕೃತ ಯೋಜನೆ ಮತ್ತು ಜನರ ಸಹಭಾಗಿತ್ವದೊಂದಿಗೆ ಗಾಂಧಿ ಕಂಡ ಗ್ರಾಮ ಸ್ವರಾಜ್ ಕನಸು ನನಸಾಗಬೇಕಿದೆ ಎಂದು ಮಾಜಿ ಶಾಸಕರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್. ಪಾಟೀಲ ಆಶಿಸಿದರು.
ಸಮೀಪದ ಅಬ್ಬಿಗೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993ರ ಅಡಿಯಲ್ಲಿ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಸಮಾಜದಲ್ಲಿನ ಯುವಕರು ಮತ್ತು ಗುರು-ಹಿರಿಯರಲ್ಲಿ ತಪ್ಪುಗಳನ್ನು ಖಂಡಿಸುವ ಗುಣ ಕಡಿಮೆಯಾಗುತ್ತಿದೆ. ಇದರಿಂದ, ಗ್ರಾಮದಲ್ಲಿನ ಸ್ವರಾಜ್ಯ ಕಲ್ಪನೆ ನನಸಾಗುತ್ತಿಲ್ಲ. ಜನರು ಜಾಗೃತರಾದಾಗ ಪಂಚಾಯತ್ ರಾಜ್ ಆಡಳಿತ ಸನ್ಮಾರ್ಗದಲ್ಲಿರುತ್ತದೆ. ವಾರ್ಡ್ ಸಭೆ, ಜನವಸತಿ ಸಭೆ ಗ್ರಾಮಸಭೆಗಳಲ್ಲಿ ಪಾಲ್ಗೊಳ್ಳಬೇಕು ಮತ್ತು ಇವುಗಳ ಮಹತ್ವ ತಿಳಿಯಬೇಕು. ಗ್ರಾಮ ಸಭೆಗಳ ನಿರ್ಣಯಗಳನ್ನು ತಿರಸ್ಕರಿಸುವ ಅಧಿಕಾರ ಯಾರಿಗೂ ಇಲ್ಲ. ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಮುಂದಿನ ಐದು ವರ್ಷಗಳ ಆದ್ಯತೆ ಮತ್ತು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಯೋಗ್ಯರಿಗೆ ಸರಕಾರಿ ಲಾಭ ತಲುಪುವಂತೆ ಜನಸಾಮಾನ್ಯರು ಪ್ರಯತ್ನಿಸಬೇಕು. ಗ್ರಾಮ ನೈರ್ಮಲ್ಯಗಳಲ್ಲಿ ಪಾಲ್ಗೊಂಡು ಗಾಂಧಿ ಕನಸಿನಂತೆ ಗ್ರಾಮ ಸ್ವರಾಜ್ಯವನ್ನು ರಾಮರಾಜ್ಯ ಮಾಡಬೇಕಿದೆ ಎಂದು ಕರೆ ನೀಡಿದರು.
ರೋಣ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ ಮಾತನಾಡಿ, ಗ್ರಾಮಾಡಳಿತ ಎಂದರೆ ಸ್ಥಳೀಯ ಸರ್ಕಾರ. ಈ ಸ್ಥಳೀಯ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವಿದೆ. ಪಂಚಾಯತ್‌ಗಳ ಕ್ರಿಯಾ ಯೋಜನೆ ಮತ್ತು ಪ್ರಗತಿಗಳಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳ್ಳುವುದರ ಜೊತೆಗೆ, ಗ್ರಾಮದ ಸ್ವಚ್ಛತೆಗೆ ಜಾಗೃತಿ ಮೂಡಿಸಬೇಕು. ಪ್ರತಿ ಮಾಸದಲ್ಲಿ ಒಂದು ದಿನ ಗ್ರಾಮದಲ್ಲಿ ಶ್ರಮದಾನದ ಮೂಲಕ ಜನರಲ್ಲಿ ಅರಿವು ಮೂಡಿಸಿ ಗಾಂಧಿಯವರ ಗ್ರಾಮ ಸ್ವರಾಜ್ ಮತ್ತು ಸ್ವಚ್ಛ ಭಾರತ ನಿರ್ಮಿಸಲು ಪ್ರಜ್ಞಾವಂತರು ಶ್ರಮಿಸಬೇಕು. ಸದ್ವಿಚಾರ, ಸದ್ಬೋಧನೆಗಳ ಮೂಲಕ ಗಾಂಧಿ ಕನಸನ್ನು ನನಸಾಗಿಸೋಣ. ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಮೂಲಕ ವಿಕೇಂದ್ರೀಕೃತ ಯೋಜನೆ, ನೈಜ ಪ್ರಗತಿ ಮತ್ತು ಕೆಲಸ ಆಧಾರಿತ ಲೆಕ್ಕಪತ್ರ ನಿರ್ವಹಣೆಯನ್ನು ಬೆಂಬಲಿಸೋಣ ಎಂದು ಕರೆ ನೀಡಿದರು.
ರಾಮಣ್ಣ ಬಸವರಡ್ಡೇರ, ಸುರೇಶ ಬಸವರಡ್ಡೇರ, ಬಸವರಾಜ ವೀರಾಪೂರ, ವಿ.ಬಿ. ಸೋಮನಕಟ್ಟಿಮಠ, ಸಿ.ಕೆ. ಮಾಳಶೆಟ್ಟಿ, ಬಸವರಾಜ ತಳವಾರ, ಪಿ.ಡಿ.ಓ ಲೋಹಿತ್ ಎಂ, ಲಲಿತಾ ರಾಥೋಡ, ಗುರಣ್ಣ ಅವರಡ್ಡಿ, ಎಚ್.ಡಿ. ದ್ವಾಸಲ, ಎಂ.ಕೆ. ಅಂಗಡಿ, ಶರಣಪ್ಪ ಮಾದಿನೂರ, ಮುತ್ತಪ್ಪ ಕುಕನೂರ, ಶಿವಪುತ್ರ ಕೆಂಗಾರ, ಸಿದ್ದು ಹನುಮನಾಳ, ಭರಮಪ್ಪ ಹನುಮನಾಳ, ರಾಮನಗೌಡ ಹಲಕುರ್ಕಿ, ಸುರೇಶ ಶಿರೋಳ ಮುಂತಾದವರು ಹಾಜರಿದ್ದರು.
ರೋಣ ತಾ.ಪಂ ಇ.ಓ ಚಂದ್ರಶೇಕರ ಕಂದಕೂರ ಮಾತನಾಡಿ, ಗ್ರಾಮ ಪಂಚಾಯತ್‌ಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಜನರಿಗೆ ಅಧಿಕಾರವಿರುತ್ತದೆ. ಆಡಳಿತ ಸರಿಯಾಗಿ ನಡೆಸಿಕೊಂಡು ಹೋಗಲಾಗುತ್ತಿದೆಯೆ ಎಂದು ವೀಕ್ಷಿಸುವುದು ಮತ್ತು ಪ್ರಶ್ನಿಸುವ ಹಕ್ಕು ನಾಗರಿಕರಿಗೆ ಇದೆ. ಸ್ಥಳೀಯ ಆಡಳಿತ ಚಟುವಟಿಕೆಗಳಲ್ಲಿ ಭಾಗವಹಿಸುವ ಜವಾಬ್ದಾರಿ ಗ್ರಾಮಸ್ಥರಿಗಿದೆ. ಗ್ರಾಮದ ಸ್ವಚ್ಛತೆ ಬಗ್ಗೆ ಕಾಳಜಿವಹಿಸುವುದು ಮತ್ತು ರಚನಾತ್ಮಕ ಸಲಹೆ ನೀಡುವುದು ಕೂಡಾ ಜನರ ಆದ್ಯತೆ ಆಗಬೇಕಾಗಿದೆ ಎಂದು ಸಲಹೆ ನೀಡಿದರು.



