ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಶಂಕರಭಾರತಿ ಮಠದಲ್ಲಿ ಬುಧವಾರ ವಿಕಲಚೇತನ ಜೋಡಿಯ ಅಪರೂಪದ ಮದುವೆಯೊಂದು ಜರುಗಿತು. ಹೆಣ್ಣಿಗೊಂದು ಗಂಡು, ಗಂಡಿಗೊಂದು ಹೆಣ್ಣನ್ನು ದೇವರು ಸೃಷ್ಟಿಸಿರುತ್ತಾನೆ, ಈ ಬಂಧ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂಬ ಮಾತಿಗೆ ಸೇರಿದ್ದ ನೂರಾರು ಜನರು ಸಾಕ್ಷಿಯಾದರು.
ಒಂದು ಕಾಲು ಸ್ವಾಧೀನವಿಲ್ಲದೇ ಒಂಟಿಕಾಲಿನಲ್ಲಿ ಸ್ವಂತ ದುಡಿಮೆಯ ಬಲದಿಂದ ಜೀವನ ಸಾಗಿಸುವ ಗಣೇಶ ಲಕ್ಷ್ಮಣ ಖಮಿತ್ಕರ್ ಎನ್ನುವ ಯುವಕ ಲಕ್ಷ್ಮೇಶ್ವರದಲ್ಲಿ ಟೇಲರಿಂಗ್ ಸಲಕರಣೆಗಳ ಮಾರಾಟ, ದುರಸ್ತಿ ಕಾರ್ಯದೊಂದಿಗೆ ಕುಟುಂಬ ನಿರ್ವಹಣೆ ಮಾಡುತ್ತಾ ಯುವಕರಿಗೆ ಮಾದರಿಯಾಗಿದ್ದಾನೆ. ಇವನಿಗೆ ಜೋಡಿಯಾದವಳು ಸವಣೂರ ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ, ಹುಟ್ಟಿನಿಂದಲೇ ಒಂದು ಕಾಲು ಇಲ್ಲದೆ ಅಣ್ಣನ ನೆರಳಿನಲ್ಲಿ ಪದವಿ ಪಡೆದು ಒಂಟಿಕಾಲಿನಲ್ಲಿ ಖಾಸಗಿ ಉದ್ಯೋಗ ಮಾಡುತ್ತಿರುವ ಸರಸ್ವತಿ (ರಾಘವೀ) ಫಕ್ಕೀರಪ್ಪ ಕಾರಡಗಿ ಎನ್ನುವ ಯುವತಿ. ಈ ಎರಡು ಮನೆತನಗಳ ಪರಸ್ಪರ ಒಪ್ಪಿಗೆಯಿಂದ ಬುಧವಾರ ಹಿರಿಯರ ಸಮಕ್ಷಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾಲಿಲ್ಲದಿದ್ದರೇನು, ನಾವು ಜೋಡಿಯಾಗಿ ನಡೆಯಬಲ್ಲೆವು, ಸುಂದರ ಬದುಕು ನಡೆಸಬಲ್ಲೆವು ಎನ್ನುವ ದೃಢ ನಿರ್ಧಾರದ ಮದುವೆ ಎಲ್ಲರ ಗಮನ ಸೆಳೆಯಿತು.
ಗಣೇಶ ಚಿಕ್ಕ ವಯಸ್ಸಿನಲ್ಲಿ ನಡೆದ ಅಪಘಾತವೊಂದರಲ್ಲಿ ಬಲಗಾಲನ್ನು ಕಳೆದುಕೊಂಡ ನತದೃಷ್ಟ. ಆದರೆ ಧೃತಿಗೆಡದೆ ಒಂಟಿಕಾಲಿನಲ್ಲಿಯೇ ಟೇಲರಿಂಗ್ ಉದ್ಯೋಗದಲ್ಲಿ ಯಶಸ್ಸು ಪಡೆದು ಉತ್ತಮ ಜೀವನ ಸಾಗಿಸುತ್ತಿದ್ದಾನೆ. ದುಡಿಮೆಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಗಣೇಶನ ತಂದೆ ಇಹಲೋಕ ತ್ಯಜಿಸಿದ್ದು, ತಾಯಿ ಇದ್ದಾರೆ. ಮದುವೆ ವಯస్సಿಗೆ ಬಂದ ಮಗನಿಗೆ ಮದುವೆ ಮಾಡುವ ಚಿಂತೆಯಲ್ಲಿದ್ದ ತಾಯಿ ಭಾರತಿ ಅವರಿಗೆ ಕೊನೆಗೂ ಅದೃಷ್ಟ ಎನ್ನುವಂತೆ ಗುಣವಂತೆ, ಪದವೀಧರೆ ಜೊತೆಗೆ ಉದ್ಯೋಗ ನಿಭಾಯಿಸಿಕೊಂಡು ಹೋಗುವಂತಹ ಯುವತಿ ರಾಘವೀ ದೊರಕಿರುವುದರಿಂದ ತಾಯಿ ಸಂಭ್ರಮಿಸಿದಳು.
ಹುಟ್ಟಿನಿಂದಲೇ ಬಲಗಾಲನ್ನು ಕಳೆದುಕೊಂಡಿರುವ, ತಂದೆಯನ್ನು ಕಳೆದುಕೊಂಡಿದ್ದ ರಾಘವಿಗೆ ತಾಯಿ ಮತ್ತು ಸಹೋದರ ಆಸರೆಯಾಗಿದ್ದಾರೆ. ರಾಘವೀ ಬಿ.ಎ ಪದವಿಯೊಂದಿಗೆ ಕಂಪ್ಯೂಟರ್ ಶಿಕ್ಷಣ ಪಡೆದುಕೊಂಡಿದ್ದಾಳೆ. ಅಣ್ಣ ಸಂದೀಪನ ಔಷಧಿ ಅಂಗಡಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಇವಳು ಚಾಕಚಕ್ಯತೆಯಿಂದ ವ್ಯಾಪಾರ ನಿಭಾಯಿಸುವ ಜಾಣ್ಮೆ ಹೊಂದಿದ್ದಾಳೆ. ಇದೀಗ ಗಣೇಶನ ರೂಪದಲ್ಲಿ ಮತ್ತೊಂದು ಕಾಲು ಪಡೆದ ರಾಘವೀ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ. ಈ ವಿಕಲ ಮಕ್ಕಳ ಜೀವನದ ಮಹತ್ವದ ಘಟ್ಟವಾದ ಮದುವೆಯ ಬಂಧಕ್ಕೊಳವಾಗಿ ಜೊತೆಯಾಗಿ ಸಪ್ತಪದಿ ತುಳಿದ ಕ್ಷಣದಲ್ಲಿ ಎಲ್ಲರ ಕಣ್ಣಂಚಿನಲ್ಲಿ ಆನಂದಬಾಷ್ಪ ತುಂಬಿಕೊಂಡಿದ್ದವು.
ಕಾಲಿಲ್ಲ ಎಂಬ ಕೊರಗನ್ನು ಬದಿಗೊತ್ತಿ ನಾವೂ ಎಲ್ಲರಂತೆ ಬದುಕಬಲ್ಲೆವು, ಬದುಕಿಸಬಲ್ಲೆವು ಎಂದು ಸ್ವಾವಲಂಬನೆಯ ಜೀವನ ನಡೆಸುತ್ತಾ ಅಂಗಕ್ಕೆ ನ್ಯೂನ್ಯತೆ ಹೊರತು ಮನಸ್ಸಿನ ನಿರ್ಧಾರ ನ್ಯೂನ್ಯತೆಯಲ್ಲ, ಒಂಟಿಕಾಲಿಗೆ ಜಂಟಿಯಾಗಿ ಬದುಕಿನ ಬಂಡಿಗೆ ದಾರಿ ಸುಗಮವಾಗಿ ಸಾಗಲಿ.
– ಜಿ.ಎಸ್. ಗಡ್ಡದ್ದೇವರಮಠ,
ರಾಮಣ್ಣ ಲಮಾಣಿ.
“ಎರಡೂ ಮನೆಯಲ್ಲಿ ಒಪ್ಪಿಕೊಂಡು ಇವರ ವಿವಾಹ ಜರುಗಿಸಿದ್ದೇವೆ. ಇಬ್ಬರೂ ಚೆನ್ನಾಗಿ ಜೀವನ ಸಾಗಿಸುವ ವಿಶ್ವಾಸವಿದೆ. ದೇವರು ಅವರಿಗೆ ಸಂಪೂರ್ಣ ಆಶೀರ್ವಾದ ಮಾಡಲಿ”
– ಭಾರತಿ (ವರನ ತಾಯಿ), ನಿರ್ಮಲಾ (ವಧುವಿನ ತಾಯಿ)



