ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ರೈತರ ಬದುಕು ಹಸನಾಗಿಸುವ ನಿಟ್ಟಿನಲ್ಲಿ ಕೊಳವೆ ಬಾವಿ ಕೊರೆಯಿಸಿ ನೀರಾವರಿ ಸೌಲಭ್ಯ ಕಲ್ಪಿಸುವ ಸರ್ಕಾರದ ಗಂಗಾ ಕಲ್ಯಾಣ ಯೋಜನೆ ಅತ್ಯಂತ ಮಹತ್ವಾದ್ದಾಗಿದೆ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಅವರು ಸೋಮವಾರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಡಿ. ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿಯ ರೈತರ ಜಮೀನಿನಲ್ಲಿ ಬೋರ್‌ವೆಲ್/ಕೊಳವೆಬಾವಿ ಕೊರೆಯಿಸುವ ಕಾರ್ಯಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಲಕ್ಮೇಶ್ವರ ತಾಲೂಕು ಕೃಷಿಯನ್ನೇ ಆಧರಿಸಿದ್ದರೂ ನದಿ, ದೊಡ್ಡ ಕೆರೆ, ಬಾವಿಗಳಿಲ್ಲದ್ದರಿಂದ ಒಣ ಬೇಸಾಯವೇ ಪ್ರಧಾನವಾಗಿದೆ. ನೀರಾವರಿಗೆ ಬೋರ್‌ವೆಲ್ ಮಾತ್ರ ಆಧಾರವಾಗಿದ್ದು, ಕ್ಷೇತ್ರದ ರೈತ ಫಲಾನುಭವಿಗಳಿಗೆ ಉಚಿತವಾಗಿ ಕೊಳವೆಬಾವಿ ಕೊರೆಯಿಸಿ, ಪಂಪು-ಮೋಟಾರು ಮತ್ತು ವಿದ್ಯುತ್ ಸಂಪರ್ಕ ಒದಗಿಸಿಕೊಡುವ ಸರ್ಕಾರದ ಗಂಗಾ ಕಲ್ಯಾಣ ಯೋಜನೆ ಆಸರೆಯಾಗಿದೆ. ಸರ್ಕಾರ ಕೆಲವೇ ಜನ ರೈತರಿಗೆ ಈ ಯೋಜನೆ ಕಲ್ಪಿಸುವ ಬದಲಾಗಿ ಆದ್ಯತೆಗೆ ತಕ್ಕಂತೆ ಹೆಚ್ಚಿನ ರೈತರಿಗೆ ಈ ಸೌಲಭ್ಯ ಸಿಗುವಂತಾಗಬೇಕು. ಈ ನಿಟ್ಟನಲ್ಲಿ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.
ಈ ವೇಳೆ ಬಿಜೆಪಿ ರೈತ ಮೋರ್ಚಾದ ಡಿ.ವೈ. ಹುನಗುಂದ, ಮುದಕಣ್ಣ ಗಡದ, ಮಂಜುನಾಥ ತಳವಾರ, ನಟರಾಜ ಪವಾಡದ, ಫಕೀರೇಶ ಕಾಡಣ್ಣವರ, ಮಹೇಶ ಮಾದಾಪೂರ, ಗುರುಬಸವ ಉಳ್ಳಟ್ಟಿ, ಪರಶುರಾಮ ತಳವಾರ, ಕಿರಣ ಲಮಾಣಿ, ಗಣೇಶ ಲಮಾಣಿ ಹಾಗೂ ನಿಗಮದ ಅಧಿಕಾರಿ ಪ್ರದೀಪ ಕೊನ್ನೂರ ಸೇರಿ ಹಲವರಿದ್ದರು.