ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಕಪ್ಪತ್ತಗಿರಿಯ ಸೆರಗಿನಲ್ಲಿರುವ ಆದ್ರಳ್ಳಿ ಗ್ರಾಮದ ಪೂರ್ವ ದಿಕ್ಕಿನಲ್ಲಿರುವ ಗುಡ್ಡವು ಅತ್ಯಂತ ಅದ್ಭುತ, ವಿಸ್ಮಯಕಾರಿಯಾಗಿದೆ. ಈ ಗುಡ್ಡವು ಸಾಹಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ಅದ್ಭುತ ವಿಸ್ಮಯ ಲೋಕವನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಲಕ್ಷ್ಮೇಶ್ವರದಿಂದ ಕೇವಲ 15 ಕಿ.ಮೀ ಅಂತರದಲ್ಲಿರುವ ಗವಿಗುಡ್ಡ ಈ ಭಾಗದ ಪ್ರೇಕ್ಷಣೀಯ ತಾಣವಾಗಿದೆ.
ಭೂಮಿಯಿಂದ 250 ಅಡಿ ಎತ್ತರವಿರುವ ಗುಡ್ಡದಲ್ಲಿನ ಬೃಹತ್ ಏಕಶಿಲೆಯಲ್ಲಿ ಇರುವ ಗವಿಸಿದ್ದೇಶ್ವರ ದೇವಸ್ಥಾನವು ಇಲ್ಲಿನ ವಿಶೇಷ. ಗುಡ್ಡದ ಮೇಲೆ ವಿಭಿನ್ನ ಆಕಾರದ ಶಿಲಾಕೌತುಕಗಳನ್ನು ಕಾಣಬಹುದು. ಒಂದು ಬೃಹತ್ ಬಂಡೆ ಅಂಗೈ ಅಗಲದ ಕಲ್ಲಿನ ಮೇಲೆ ನಿಂತಿರುವುದು, ಹಾವಿನ ಹೆಡೆಯಾಕಾರದ ಬೃಹತ್ ಶಿಲೆ, ಛತ್ರಿ ಆಕಾರದ ಬಂಡೆ, ಬಂಡೆಯಲ್ಲಿ ಶಿವ ತಪಗೈವ ದೃಶ್ಯ ಭಕ್ತರನ್ನು ಪುಳಕಿತಗೊಳಿಸುತ್ತದೆ. ಇತ್ತಿಚೀನ ದಿನಗಳಲ್ಲಿ ಇಲ್ಲಿನ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಅದರ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿರುವ ಶ್ರೀ ಕುಮಾರ ಮಹಾರಾಜರು ಇಂದು ಈ ಅದ್ಭುತವನ್ನು ಮತ್ತಷ್ಟು ಬೆಳಗಿಸುತ್ತಿದ್ದಾರೆ.
ಇಂತಹ ವೈಶಿಷ್ಟಪೂರ್ಣವಾದ ಆದರಹಳ್ಳಿ ಗ್ರಾಮದ ಗವಿಸಿದ್ಧೇಶ್ವರನ ಜಾತ್ರಾ ಮಹೋತ್ಸವ ಮಾ.18ಕ್ಕೆ ಪ್ರಾರಂಭವಾಗಿದ್ದು, ಮಾ.20ರವರೆಗೆ ವಿಜೃಂಭಣೆಯಿಂದ ಜರುಗಲಿದೆ. ಮಾ.18ರಂದು ರೊಟ್ಟಿ ಜಾತ್ರಾ ಮಹೋತ್ಸವ, ನಂತರ ಸಹಸ್ರ ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ, ರಾತ್ರಿ ಧಾರ್ಮಿಕ ಸಭೆ, ಪೂಜ್ಯರುಗಳ ಆಶೀರ್ವಚನ ಕಾರ್ಯಕ್ರಮಗಳು ಸಂಪನ್ನಗೊಂಡವು.
ಮಾ.19ರಂದು ಮಧ್ಯಾಹ್ನ 12 ಗಂಟೆಗೆ ಪೂಜ್ಯ ಮೌನತಪಸ್ವಿ ಶ್ವೇತಶಾಂತ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರ ಪಲ್ಲಕ್ಕಿ ಉತ್ಸವ, ಸಂಜೆ 5 ಗಂಟೆಗೆ ಮಹಾರಥೋತ್ಸವ, ಸಂಜೆ 7 ಗಂಟೆಗೆ ಧರ್ಮ ಸಭೆ, ಮಾ.20ರ ಸಂಜೆ 5ಕ್ಕೆ ಕಡುಬಿನ ಕಾಳಗ ಜರುಗಲಿದೆ ಎಂದು ಮಹಾನ್ ತಪಸ್ವಿ ಕುಮಾರ ಮಹಾರಾಜರು ತಿಳಿಸಿದ್ದಾರೆ.