ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ವಿದ್ಯಾರ್ಥಿಗಳು ಶಿಕ್ಷಣ ಪಡೆದರೆ ಸಾಲದು, ಸಮಾಜಕ್ಕೆ ಉಪಕಾರಿಯಾಗುವ ದಿಸೆಯಲ್ಲಿ ಶಿಕ್ಷಣವನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ಪಟ್ಟಣದ ರೋಣ ರಸ್ತೆಯಲ್ಲಿನ ಜಗದ್ಗುರು ತೋಂಟದಾರ್ಯ ಸಿ.ಬಿ.ಎಸ್.ಸಿ ಶಾಲೆಯಲ್ಲಿ ಲಕ್ಷ್ಮಿ ಅರ್ಬನ್ ಕೋ-ಆಪ್ ಬ್ಯಾಂಕ್‌ನ 111ನೇ ವಾರ್ಷಿಕ ಸರ್ವ ಸಾಧರಾಣ ಸಭೆಯ ನಿಮಿತ್ತ ಎಪಿಎಂಸಿ ಶಾಖೆಯ ಎಟಿಎಂ ಹಾಗೂ ಜ.ತೋಂಟದಾರ್ಯ ಕನ್ನಡ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ನೀರಿನ ಸಂಸ್ಕರಣಾ ಘಟಕ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ವಿದ್ಯೆಯೊಂದಿಗೆ ನಯ-ವಿನಯತೆ, ಸಂಸ್ಕೃತಿ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೆ ಸಮಾಜ ನಿಮ್ಮನ್ನು ಗೌರವಿಸುವದಿಲ್ಲ. ಹೀಗಾಗಿ ಶಿಕ್ಷಣ ಎಷ್ಟು ಮುಖ್ಯವೋ ಜೀವನದಲ್ಲಿ ಮಾನವೀಯ ಮೌಲ್ಯಗಳು ಸಹ ಮುಖ್ಯ ಎಂಬುದನ್ನು ಶಿಕ್ಷಕರು, ಪಾಲಕರು ತಿಳಿಸಿಕೊಡುವ ಜವಾಬ್ದಾರಿಯಿದೆ ಎಂದ ಶ್ರೀಗಳು, ಜನರ ಪ್ರೀತಿ ಮತ್ತು ವಿಶ್ವಾಸದಿಂದ 111ನೇ ವಾರ್ಷಿಕ ಸರ್ವ ಸಾಧಾರಣಾ ಸಭೆ ನಡೆಸುತ್ತಿರುವ ಲಕ್ಷ್ಮಿ ಅರ್ಬನ್ ಬ್ಯಾಂಕ್ ಠೇವಣಿದಾರರ ಹಿತಾಸಕ್ತಿ ಕಾಪಾಡುವುದರ ಜತೆಗೆ ಸಾಲ ಪಡೆಯುವ ಜನರನ್ನು ಗೌರವಿಸಿ ಸಾರ್ವಜನಿಕ ವಲಯದಲ್ಲಿ ವಿಶ್ವಾಸಗಳಿಸಿದೆ.
ಡಾ.ಅನಿಲ ಎ.ವೈದ್ಯ ಮಾತನಾಡಿ, ಪ್ರತಿಭೆಗೆ ಪುರಸ್ಕಾರ ಸಿಗುವುದು ಕ್ಷೀಣಿಸಿರುವ ಸಂದರ್ಭದಲ್ಲಿ ಲಕ್ಷ್ಮಿ ಅರ್ಬನ್ ಕೋ-ಆಪ್ ಬ್ಯಾಂಕ್ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವ ಮೂಲಕ ಸಮಾಜದ ಪ್ರತಿಭೆಗಳಿಗೆ ಮತ್ತಷ್ಟು ಪ್ರೋತ್ಸಾಹಿಸುತ್ತಿದೆ ಎಂದರು.
ಸಿಎ ಎಸ್.ಕೆ. ಚನ್ನಿ, ಡಾ. ಬಿ.ವ್ಹಿ. ಕಂಬಳ್ಯಾಳ ಮಾತನಾಡಿದರು. ಬ್ಯಾಂಕಿನ ಚೇರ್ಮನ್ ಎಸ್.ಎಸ್. ಪಟ್ಟೇದ, ಪಿ.ಎಸ್. ಕಡ್ಡಿ, ಪಿ.ವಾಯ್. ತಳವಾರ, ಪಿ.ಬಿ. ಮ್ಯಾಗೇರಿ, ಎಸ್.ಸಿ. ಬಂಡಿ, ಎಸ್.ಕೆ. ಕನಕೇರಿ, ವಿ.ಎಸ್. ನಂದಿಹಾಳ, ಎಸ್.ಕೆ. ಕನಕೇರಿ, ಆರ್.ಬಿ. ನಿಡಗುಂದಿ, ರಾಜು ಹೊಸಂಗಡಿ, ಎಂ.ಎಸ್. ಇಂಡಿ, ಎನ್.ಕೆ. ಹೊಸಂಗಡಿ ಸೇರಿ ಇತರರು ಇದ್ದರು.
ಬ್ಯಾಂಕ್ ತನ್ನ ಆರ್ಥಿಕ ಲಾಭಕ್ಕಾಗಿ ವ್ಯವಹಾರ ನಡೆಸುತ್ತಿಲ್ಲ ಎಂಬುದಕ್ಕೆವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜತೆಗೆ ಉಚಿತ ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಘಟಕ ಸೇರಿ ಅನೇಕ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಾ ಬರುತ್ತಿರುವುದು ನಿದರ್ಶನವಾಗಿದೆ ಎಂದು ಶ್ರೀಗಳು ನುಡಿದರು.