ಮಲಯಾಳಂ ಸಿನಿಮಾಗಳು ಕೇವಲ ಕಂಟೆಂಟ್ ಮಟ್ಟದಲ್ಲೇ ಗೆಲ್ಲುತ್ತವೆ, ಬಾಕ್ಸ್ ಆಫೀಸ್ನಲ್ಲಿ ದೊಡ್ಡ ದಾಖಲೆ ಮಾಡಲ್ಲ ಎಂಬ ಅಭಿಪ್ರಾಯವನ್ನು ‘ದೃಶ್ಯಂ 3’ ಸಂಪೂರ್ಣವಾಗಿ ಧೂಳಿಪಟ ಮಾಡಿದೆ. ಮೋಹನ್ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಜೋಡಿಯ ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದೀಗ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಎಬ್ಬಿಸಿದೆ.
ಬಿಡುಗಡೆಯಾದ ಕೇವಲ ನಾಲ್ಕು ದಿನಗಳಲ್ಲಿ ಸಿನಿಮಾ ವಿಶ್ವದಾದ್ಯಂತ 141.34 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, 100 ಕೋಟಿ ಕ್ಲಬ್ ದಾಟಿ ಹೊಸ ಮೈಲಿಗಲ್ಲಿನತ್ತ ದಾಪುಗಾಲಿಟ್ಟಿದೆ.
ಭಾನುವಾರ ಭಾರತದಲ್ಲಿ ಮಾತ್ರವೇ 13.95 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ ಚಿತ್ರ, ದೇಶೀಯ ಮಾರುಕಟ್ಟೆಯಲ್ಲಿ 63.34 ಕೋಟಿ ರೂಪಾಯಿ ಗ್ರಾಸ್ ಗಳಿಕೆ ದಾಖಲಿಸಿದೆ. ನೆಟ್ ಕಲೆಕ್ಷನ್ 54.55 ಕೋಟಿ ರೂಪಾಯಿ ಆಗಿದೆ.
ಅದರಲ್ಲೂ ವಿದೇಶಿ ಮಾರುಕಟ್ಟೆಯಲ್ಲಿ ಸಿನಿಮಾದ ಕ್ರೇಜ್ ಮತ್ತೊಂದು ಹಂತಕ್ಕೇರಿದೆ. ನಾಲ್ಕನೇ ದಿನ 13 ಕೋಟಿ ರೂಪಾಯಿ ಓವರ್ಸೀಸ್ ಕಲೆಕ್ಷನ್ ಮಾಡಿರುವ ‘ದೃಶ್ಯಂ 3’, ಒಟ್ಟು ವಿದೇಶಿ ಗಳಿಕೆಯನ್ನು 78 ಕೋಟಿ ರೂಪಾಯಿಗೆ ಏರಿಸಿದೆ.
ಜಾರ್ಜ್ಕುಟ್ಟಿ ಪಾತ್ರದಲ್ಲಿ ಮೋಹನ್ಲಾಲ್ ಮತ್ತೆ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ನಿಲ್ಲಿಸಿದ್ದು, ಜೀತು ಜೋಸೆಫ್ ಅವರ ಸ್ಕ್ರೀನ್ಪ್ಲೇ ಚಿತ್ರದ ಅತಿದೊಡ್ಡ ಶಕ್ತಿಯಾಗಿದೆ. ಭಾರಿ ಬಜೆಟ್, ಭರ್ಜರಿ ವಿಎಫ್ಎಕ್ಸ್ ಇಲ್ಲದಿದ್ದರೂ ಕೇವಲ ಕಥೆಯ ಬಲದಿಂದ ಸಿನಿಮಾ ಇಂಡಸ್ಟ್ರಿಯನ್ನು ಶೇಕ್ ಮಾಡಬಹುದು ಎಂಬುದನ್ನು ‘ದೃಶ್ಯಂ 3’ ಮತ್ತೊಮ್ಮೆ ಸಾಬೀತುಪಡಿಸಿದೆ.



