ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದಿದ್ದ ದೈತ್ಯ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2025ರ ಅಕ್ಟೋಬರ್ 3ರಂದು ಹನೂರು ವಲಯದ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ತಲೆ, ಭುಜ ಹಾಗೂ ಮುಂದಿನ ಕಾಲುಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ಅರಣ್ಯಾಧಿಕಾರಿಗಳು, ಪ್ರಕರಣದ ಪ್ರಮುಖ ಆರೋಪಿ ಗೋವಿಂದನನ್ನು ಬಂಧಿಸಿದ್ದಾರೆ. ಹುಲಿ ಹತ್ಯೆಯ ಬಳಿಕ ಆರೋಪಿ ಗೋವಿಂದ ತಲೆಮರೆಸಿಕೊಂಡಿದ್ದ. ಆದರೆ ಹಳೆಯ ಪ್ರಕರಣವೊಂದರ ಹಿನ್ನೆಲೆ ಮೈಸೂರು ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದನೆಂಬ ಖಚಿತ ಮಾಹಿತಿ ಅರಣ್ಯಾಧಿಕಾರಿಗಳಿಗೆ ಲಭಿಸಿತ್ತು. ಇದರಿಂದ ಕೋರ್ಟ್ ಆವರಣದಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದರು. ಕೋರ್ಟ್ ಆವರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ರೈಲು ಹತ್ತಿ ಪರಾರಿಯಾಗಲು ಪ್ರಯತ್ನಿಸಿದರೂ, ಅವನನ್ನು ಬೆನ್ನತ್ತಿದ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿ ಬಂಧಿಸಿದ್ದಾರೆ.
ಈ ಪ್ರಕರಣವನ್ನು ಕೆಡಿಪಿ ಸಭೆ ಹಾಗೂ ಅರಣ್ಯ ಸಚಿವರ ನೇತೃತ್ವದ ಸಭೆಯಲ್ಲೂ ಎರಡು ಬಾರಿ ಪ್ರಸ್ತಾಪಿಸಲಾಗಿತ್ತು. ‘ಮಿನಿ ವೀರಪ್ಪನ್’ ಎಂದು ಕರೆಯಲ್ಪಟ್ಟಿದ್ದ ಆರೋಪಿಯನ್ನು ಬಂಧಿಸುವಂತೆ ವ್ಯಾಪಕ ಒತ್ತಾಯವೂ ವ್ಯಕ್ತವಾಗಿತ್ತು. ಇದೀಗ ಪ್ರಮುಖ ಆರೋಪಿಯ ಬಂಧನದಿಂದ ತನಿಖೆಗೆ ಮಹತ್ವದ ಮುನ್ನಡೆ ದೊರೆತಿದೆ. ಆರೋಪಿ ಗೋವಿಂದ ಅರಣ್ಯದಲ್ಲಿ ಗುಂಪು ಕಟ್ಟಿಕೊಂಡು ಶಿಕಾರಿಯಲ್ಲಿ ತೊಡಗುತ್ತಿದ್ದನೆಂಬ ಮಾಹಿತಿ ಲಭ್ಯವಾಗಿದೆ. ಈತನ ವಿರುದ್ಧ ಈಗಾಗಲೇ ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಪ್ರಕರಣವನ್ನು ಭೇದಿಸಿದ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.



