ಮೊಹರಂ ಹಬ್ಬಕ್ಕೆ ಹುಲಿವೇಷದ ಮೆರುಗು

0
Glam of tiger costume for Muharram festival
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕಳೆದೊಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯ ನಡುವೆಯೂ ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ಮೊಹರಂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲು ಜನತೆ ಸನ್ನದ್ಧರಾಗಿದ್ದಾರೆ.

Advertisement

ಹಿಂದೂ-ಮುಸ್ಲಿಮರ ಭಾವೈಕ್ಯತೆ ಸಾರುವ ಮೊಹರಂ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಎಲ್ಲೆಡೆ ಮೊಹರಂ ಹುಲಿಗಳದ್ದೇ ಅಬ್ಬರ ಕಂಡು ಬರುತ್ತಿದೆ. ಹಸೇನ-ಹುಸೇನರು ವೀರ ಸ್ವರ್ಗವನ್ನಪ್ಪಿದ ಆಚರಣೆಯ ಹಿನ್ನೆಲೆಯಲ್ಲಿ ಆಚರಿಸುವ ಮೊಹರಂ ಹಬ್ಬದ ಸಂದರ್ಭದಲ್ಲಿ ನಂಬಿಕೆಯಂತೆ ಪ್ರಾಯಶ್ಚಿತ್ತ ಮತ್ತು ಹರಕೆಗಾಗಿ ಹುಲಿ ವೇಷ ಧರಿಸಿ ಹಬ್ಬಕ್ಕೆ ಮೆರಗು ತರುತ್ತಾರೆ. ಹಿಂದೂ ಮುಸ್ಲಿಮರೆಲ್ಲರೂ ಮೈತುಂಬ ಹುಲಿ ವೇಷ ಬರೆಸಿಕೊಂಡು ಹಲಗೆ ಬಾರಿಸುತ್ತಾ ನಾದಕ್ಕೆ ತಕ್ಕಂತೆ ಕುಣಿಯುತ್ತಾರೆ. ಅಳ್ಳೊಳ್ಳಿ ಬವ್ವಾ ವೇಷದೊಂದಿಗೆ ಮಕ್ಕಳನ್ನು, ಜನರನ್ನು ಆಕರ್ಷಿಸುತ್ತಾ ಕಾಣಿಕೆ ಸ್ವೀಕರಿಸುತ್ತಾರೆ. ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ವೇಷಧಾರಿ ಭಕ್ತರು ಎಲ್ಲರ ಮನರಂಜಿಸುತ್ತಿದ್ದಾರೆ.

Glam of tiger costume for Muharram festival

ಪಟ್ಟಣ ಸೇರಿ ತಾಲೂಕಿನಾದ್ಯಂತ ನಿಗದಿತ ಸ್ಥಳದಲ್ಲಿ ಪಾಂಜಾಗಳ ಪ್ರತಿಷ್ಠಾನೆ ಮಾಡಲಾಗಿದ್ದು, ಮಂಗಳವಾರ ಕತ್ತಲರಾತ್ರಿ, ಬುಧವಾರ ಪಾಂಜಾಗಳ ಮೆರವಣಿಗೆ ನಡೆಯಲಿದೆ. ಪಟ್ಟಣದ ಯುವ ಕಲಾವಿದ, ಕಲಾ ಶಿಕ್ಷಕ ಪ್ರವೀಣ ಗಾಯಕರ ಹುಲಿವೇಷ ಬರೆಯುವದರಲ್ಲಿ ಸಿದ್ಧಹಸ್ತರು. ಪ್ರತಿವರ್ಷ ಲಕ್ಷ್ಮೇಶ್ವರ ಮತ್ತು ಸುತ್ತಲಿನ ಹತ್ತಾರು ಗ್ರಾಮಗಳ ಜನರಿಗೆ ಹುಲಿವೇಷದ ಬಣ್ಣ ಬರೆಯುವ ಪ್ರವೀಣ ತಮ್ಮ ಪ್ರಾವೀಣ್ಯತೆ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಹಬ್ಬದ ಮುನ್ನಾದಿನ ಹುಲಿವೇಷಧಾರಿಗಳಿಗೆ ಬಣ್ಣ ಬಳಿಯುವ ಕಾಯಕದಲ್ಲಿ ಮನೆಮಂದಿಯೆಲ್ಲಾ ನಿರತರಾಗಿರುತ್ತಾರೆ. ಇವರ ಕಲಾ ನೈಪುಣ್ಯತೆಯಿಂದ ನೂರಾರು ಹುಲಿವೇಷಧಾರಿಗಳು ಮೊಹರಂ ಹಬ್ಬಕ್ಕೆ ರಂಗು ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಹುಲಿವೇಷ ಬರೆಸಿಕೊಳ್ಳವವರ ಸಂಖ್ಯೆ ತೀರಾ ಕಡಿಮೆಯಾದರೂ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆಯಾಗಿಲ್ಲ. ಕುಟುಂಬದ ಮೂಲ ಕಲಾಸೇವೆಯನ್ನು ಇದೀಗ ತನ್ನ ಸಂಗಡಿಗರೊಂದಿಗೆ ಸೇರಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here