ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಹೂವಿನಶಿಗ್ಲಿ ವಿರಕ್ತಮಠದ ಜಾತ್ರಾಮಹೋತ್ಸವದ ಅಂಗವಾಗಿ ಮಕರ ಸಂಕ್ರಮಣಕಾಲದ ಗೋಧೂಳಿ ಸಮಯದಲ್ಲಿ ಮಂಗಳವಾರ ಅಪಾರ ಭಕ್ತ ಸಮೂಹದ ನಡುವೆ ಸಕಲ ವಾದ್ಯ ವೈಭವಗಳೊಂದಿಗೆ ಮಹಾರಥೋತ್ಸವ ನೆರವೇರಿತು.
ಬೆಳಿಗ್ಗೆ ನಿರಂಜನ ಶ್ರೀಗಳ ಕರ್ತೃ ಗದ್ದುಗೆ ರುದ್ರಾಭಿಷೇಕ, ವಿಶೇಷ ಹೂವಿನ ಅಲಂಕಾರ, ಮಂಗಳಾರತಿ, ಲಿಂ.ಶ್ರೀಗಳ ಭಾವಚಿತ್ರ ಮೆರವಣಿಗೆ, ಗುರು ಗುಹೆಸಿದ್ದೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ ಸೂರಣಗಿ ಹಾಗೂ ಯಲವಿಗಿ ಗ್ರಾಮದ ಪುರವಂತರ ವೀರಗಾಸೆಯೊಂದಿಗೆ ನಡೆಯಿತು. ಬೆಳಗಿನಿಂದಲೇ ಮಹಿಳೆಯರು, ಮಕ್ಕಳು ಹೊಸ ಉಡುಗೆ ತೊಟ್ಟು ಶ್ರೀಮಠಕ್ಕೆ ಆಗಮಿಸಿದ್ದರು. ರಥಕ್ಕೆ ಹೊಸ ವಸ್ತಾçಭರಣಗಳನ್ನಿರಿಸಿ ಉಡಿ ತುಂಬಿ ಶೃದ್ಧಾ ಭಕ್ತಿಯಿಂದ ಪೂಜಿಸಿದರು.
ಸಂಜೆ ರಥ ಸಾಗುತ್ತಿದ್ದಂತೆಯೇ ಸೇರಿದ್ದ ಅಪಾರ ಭಕ್ತ ಸಮೂಹ ಭಕ್ತಿ-ಭಾವಗಳಿಂದ ಉತ್ತತ್ತಿ, ಹಣ್ಣುಗಳನ್ನು ತೇರಿಗೆ ಎಸೆದು ಘೋಷಣೆಗಳನ್ನು ಕೂಗಿದರು. ಡೊಳ್ಳು, ನಂದಿಕೋಲು, ಕೀಲುಕುದುರೆ ನೃತ್ಯ, ಸಕಲ ವಾದ್ಯ ವೈಭವದೊಂದಿಗೆ ಅಪಾರ ಭಕ್ತ ಸಮೂಹದೊಂದಿಗೆ ರಥೋತ್ಸವ ಜರುಗಿತು. ಈ ವೇಳೆ ಶ್ರೀಮಠ ಚನ್ನವೀರ ಶ್ರೀಗಳು ಸೇರಿ ಧಾರವಾಡ, ಬೆಳ್ಳಟ್ಟಿ, ಹಿರೇಮಣಕಟ್ಟಿ, ಬಳೂಟಗಿ ಶ್ರೀಗಳು ಉಪಸ್ಥಿತರಿದ್ದು ಭಕ್ತರನ್ನು ಆಶೀರ್ವದಿಸಿದರು. ಇದೇ ಸಂದರ್ಭದಲ್ಲಿ ಶ್ರೀಮಠದ ಹಳೆಯ ವೈದಿಕ ವಿದ್ಯಾರ್ಥಿಗಳಿಂದ ಪೀಠಾಧ್ಯಕ್ಷರ ತುಲಾಭಾರ ನೆರವೇರಿತು.



