ಬೆಂಗಳೂರು: ತನ್ನ ದೊಡ್ಡಮ್ಮ ಮನೆಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಯಾರಿಗೂ ತಿಳಿಯದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಆರೋಪದಡಿ ಸಹೋದರಿ ಮಗನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರಹಳ್ಳಿ ನಿವಾಸಿ ಶರತ್ (31) ಬಂಧಿತ ಆರೋಪಿ. ಈತನಿಂದ ₹36 ಲಕ್ಷ ಮೌಲ್ಯದ 241 ಗ್ರಾಂ ಚಿನ್ನಾಭರಣ, 2.8 ಕೆ.ಜಿ ಬೆಳ್ಳಿ ಹಾಗೂ ₹1.30 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತ್ಯಾಗರಾಜನಗರದ ಮನೆಯೊಂದರಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಈ ಕೃತ್ಯ ನಡೆದಿತ್ತು. ಮನೆ ಮಾಲೀಕರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಮಾಲಕಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಅವರ ಮಗಳು ಹೈದರಾಬಾದ್ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ 25 ವರ್ಷಗಳಿಂದ ದೂರುದಾರರ ಮನೆಯಲ್ಲಿ ಆರೋಪಿ ದೊಡ್ಡಮ್ಮ ಮನೆಕೆಲಸ ಮಾಡುತ್ತಿದ್ದರು. ನಂಬಿಕೆಯ ಮೇರೆಗೆ ಮನೆಯ ಮತ್ತೊಂದು ಬೀಗದ ಕೀಯನ್ನು ಮನೆಕೆಲಸದಾಕೆಗೆ ನೀಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೊಡ್ಡಮ್ಮಗೆ ಊಟ ನೀಡಲು ಶರತ್ ಆಗಾಗ ಮಾಲೀಕರ ಮನೆಗೆ ಬರುತ್ತಿದ್ದ. ಈ ವೇಳೆ ಮನೆ ಮಾಲೀಕರು ಇಲ್ಲದಿರುವುದನ್ನು ಗಮನಿಸಿದ ಆತ, ಕಳವು ಮಾಡಲು ಸಂಚು ರೂಪಿಸಿದ್ದ. ದೊಡ್ಡಮ್ಮಗೆ ತಿಳಿಯದಂತೆ ಆಕೆ ಬಳಿಯಿದ್ದ ಬೀಗದ ಕೀ ಪಡೆದು ಕಳೆದ ವರ್ಷ ಅಕ್ಟೋಬರ್ 22ರಂದು ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ಕಳವು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಮಾನದ ಮೇರೆಗೆ ಮನೆಕೆಲಸದಾಕೆಯನ್ನು ವಿಚಾರಣೆ ನಡೆಸಿದಾಗ, ಕೃತ್ಯದ ಬಗ್ಗೆ ತಾನು ಏನೂ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದಾಳೆ. ತಾಂತ್ರಿಕ ತನಿಖೆ ನಡೆಸಿದರೂ ಆರಂಭದಲ್ಲಿ ಆರೋಪಿಯ ಪತ್ತೆಯಾಗಿರಲಿಲ್ಲ. ನಂತರ ಮತ್ತೊಮ್ಮೆ ವಿಚಾರಣೆ ವೇಳೆ ಮನೆಕೆಲಸದಾಕೆಯ ಮನೆಯಲ್ಲಿದ್ದ ಶರತ್ನನ್ನು ತೀವ್ರವಾಗಿ ಪ್ರಶ್ನಿಸಿದಾಗ, ಕೃತ್ಯವೆಸಗಿರುವುದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.



