ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾಗೊಂಡಿದೆ. ಪ್ರಕರಣದ ಗಂಭೀರತೆ ಪರಿಗಣಿಸಿ ಹಾಗೂ ನಟಿಯ ಪ್ರಭಾವ ಗಮಿನಿಸಿದ 64 ನೇ ಸಿಸಿಹೆಚ್ ನ್ಯಾಯಾಲಯವು ರನ್ಯಾ ರಾವ್ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.
ನಟಿ ರನ್ಯಾ ರಾವ್ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಲಿಂಕ್ ಗಳು ಇವೆ, ಕಸ್ಟಮ್ಸ್ ಬ್ಯಾಬೇಜ್ ನಿಯಮ ಉಲ್ಲಂಘನೆ ಮಾಡಲಾಗಿದೆ. ಹೀಗಾಗಿ ನಟಿ ಜಾಮೀನಿನ ಮೂಲಕ ಹೊರ ಬಂದರೆ ಪ್ರಭಾವ ಬಳಸಿ ಸಾಕ್ಷಿ ನಾಶ ಮತ್ತು ತನಿಖೆಯ ಹಾದಿ ತಪ್ಪಿಸಬಹುದು. ಆಕೆ ಒಂದು ವರ್ಷದ ಅವಧಿಯಲ್ಲಿ ಇಪತ್ತೇಳು ಬಾರಿ ವಿದೇಶಿ ಪ್ರಯಾಣ ಮಾಡಿದ್ದಾರೆ, ಈಕೆಯಿಂದ ಮೂವತ್ತೆಂಟು ಪರ್ಸೆಂಟ್ ಕಸ್ಟಮ್ಸ್ ಸುಂಕ ವಂಚನೆ ಆಗಿದೆ. ಒಟ್ಟು 4,83,72,694 ರೂ ಸುಂಕ ವಂಚನೆ ಆಗಿದೆ. ಜಾಮೀನು ಕೊಟ್ಟರೆ ದೇಶ ಬಿಡುವ ಸಾಧ್ಯತೆ ಇದೆ. ಪ್ರಭಾವಿಗಳು ಪ್ರಕರಣದಲ್ಲಿದ್ದು ತನಿಖೆಯ ಹಾದಿ ತಪ್ಪಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಜಾಮೀನು ಅರ್ಜಿ ವಜಾ ಗೊಳಿಸಲಾಗಿದೆ.
ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅನ್ನು ಡಿಆರ್ಐ ಅಧಿಕಾರಿಗಳು ಮಾರ್ಚ್ 3 ರಂದು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಆ ಬಳಿಕ ನಡೆದ ತನಿಖೆಯಲ್ಲಿ ಹಲವು ಆಘಾತಕಾರಿ ಅಂಶಗಳು ಹೊರಬಂದಿದ್ದವು. ನಟಿ ರನ್ಯಾ ರಾವ್ ಬರೋಬ್ಬರಿ 14 ಕೆಜಿಗೂ ಹೆಚ್ಚಿನ ತೂಕದ ಚಿನ್ನವನ್ನು ಕಳ್ಳ ಸಾಗಣೆ ಮಾಡುವಾಗ ಸಿಕ್ಕಿ ಬಿದ್ದಿದ್ದಳು. ನಟಿ ರನ್ಯಾ ರಾವ್, ಸರ್ಕಾರದ ಉನ್ನತ ಅಧಿಕಾರಿಗಳಿಗೆ ನೀಡಲಾಗುವ ಸವಲತ್ತುಗಳನ್ನು ಬಳಸಿಕೊಂಡು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಅಂಶ ವಿಚಾರಣೆ ವೇಳೆ ಬಯಲಾಗಿದೆ.