ವಿಜಯಪುರ: ಜಿಲ್ಲೆಯಲ್ಲೇ ಅಚ್ಚರಿ ಮೂಡಿಸುವ ಘಟನೆ ನಡೆದಿದೆ. ಸಾಮಾನ್ಯವಾಗಿ 500 ರೂ.ಯಿಂದ 2000 ರೂ.ವರೆಗೆ ಮಾರಾಟವಾಗುವ ಮಾವಿನ ಹಣ್ಣು, ಇಲ್ಲಿನ ಇಂಡಿ ಪಟ್ಟಣದಲ್ಲಿ ಬರೋಬ್ಬರಿ ₹1 ಲಕ್ಷಕ್ಕೆ ಮಾರಾಟವಾಗಿದೆ.
ಅನಂತ ಹಾಗೂ ರಾಜಶ್ರೀ ದಂಪತಿಗಳ ತೋಟದಲ್ಲಿ ಬೆಳೆದ ಅಪರೂಪದ ಮಿಯಾಝಕಿ ತಳಿಯ ಮಾವು ಈ ದಾಖಲೆಯ ಬೆಲೆಗೆ ಮಾರಾಟವಾಗಿದೆ. ಬಂಜರು ಭೂಮಿಯಲ್ಲೇ ಬೆಳೆದು ಫಲ ನೀಡಿರುವ ಈ ಮಾವಿನ ಗಿಡಗಳು ಈಗ ಹಣ್ಣುಗಳೊಂದಿಗೆ ಎಲ್ಲರ ಗಮನ ಸೆಳೆದಿವೆ.
ಸುಮಾರು 20 ವರ್ಷಗಳ ಹಿಂದೆ ಆಂಧ್ರಪ್ರದೇಶದ ರಾಜಮಂಡ್ರಿಯಿಂದ ತಲಾ ₹10 ಸಾವಿರಕ್ಕೆ 25 ಮಿಯಾಝಕಿ ಸಸಿಗಳನ್ನು ತಂದು ನೆಟ್ಟಿದ್ದ ದಂಪತಿ, ಇದೀಗ ಪ್ರತಿಯೊಂದು ಗಿಡದಿಂದ 25 ರಿಂದ 30 ಹಣ್ಣುಗಳನ್ನು ಪಡೆಯುತ್ತಿದ್ದಾರೆ.
ಈ ಅಪರೂಪದ ಮಾವಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಕೋಲ್ಕತ್ತಾ ಮತ್ತು ಮುಂಬೈನಿಂದ ದಲ್ಲಾಳಿಗಳು ಸಂಪರ್ಕಿಸಿದ್ದು, ಭಾರಿ ಬೇಡಿಕೆ ವ್ಯಕ್ತವಾಗಿದೆ. ವಿದೇಶಗಳಲ್ಲಿ ಈ ಮಾವಿಗೆ ಕೆಜಿಗೆ ₹2 ರಿಂದ ₹2.5 ಲಕ್ಷದವರೆಗೆ ಬೆಲೆ ಇರುವುದಾಗಿ ತಿಳಿದುಬಂದಿದೆ.
ಮೊದಲ ವರ್ಷದಲ್ಲಿ ದಂಪತಿ ಮನೆಯವರೇ ಹಣ್ಣು ಸವಿದಿದ್ದರು. ಆದರೆ ಈ ಬಾರಿ ಬೆಳೆ ಬಂದ ನಂತರ ಸಾಮಾಜಿಕ ಮಾಧ್ಯಮದ ಮೂಲಕ ಜನರಿಗೆ ಪರಿಚಯವಾದ ಪರಿಣಾಮ, ಹಣ್ಣುಗಳಿಗೆ ಭಾರಿ ಬೇಡಿಕೆ ಬಂದಿದೆ.
ಬಂಜರು ಭೂಮಿಯಲ್ಲೇ ಬೆಳೆದು ಯಶಸ್ಸು ಕಂಡ ಈ ಮಿಯಾಝಕಿ ಮಾವು ಇದೀಗ ವಿಜಯಪುರ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ.



