ಹುಬ್ಬಳ್ಳಿ: ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಾಗೂ ಛತ್ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಯಂತ್ರಿಸಲು ಹುಬ್ಬಳ್ಳಿ–ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ರೈಲು ಸಂಖ್ಯೆ 07341 ಎಸ್ಎಸ್ಎಸ್ ಹುಬ್ಬಳ್ಳಿ–ಚಿಕ್ಕಮಗಳೂರು ವಿಶೇಷ ಎಕ್ಸ್ಪ್ರೆಸ್ ಸೆಪ್ಟೆಂಬರ್ 5ರಿಂದ ಅಕ್ಟೋಬರ್ 31ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಸಂಚರಿಸಲಿದೆ. ಬೆಳಗ್ಗೆ 5 ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು ಬೆಳಗ್ಗೆ 11.15ಕ್ಕೆ ಚಿಕ್ಕಮಗಳೂರು ತಲುಪಲಿದೆ.
ಹಿಂತಿರುಗುವ ರೈಲು ಸಂಖ್ಯೆ 07342 ಚಿಕ್ಕಮಗಳೂರು–ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ಪ್ರೆಸ್ ಇದೇ ಅವಧಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಚರಿಸಲಿದೆ. ಈ ರೈಲು ಸಂಜೆ 5.30ಕ್ಕೆ ಚಿಕ್ಕಮಗಳೂರಿನಿಂದ ಹೊರಟು ರಾತ್ರಿ 11.20ಕ್ಕೆ ಹುಬ್ಬಳ್ಳಿ ತಲುಪಲಿದೆ.
ಹಲವು ನಿಲ್ದಾಣಗಳಲ್ಲಿ ನಿಲುಗಡೆ:
ವಿಶೇಷ ರೈಲು ಕುಂದಗೋಳ, ಸಂಶಿ, ಯಲವಿಗಿ, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಅಜ್ಜಂಪುರ, ಬೀರೂರು, ಕಡೂರು, ಸಖರಾಯಪಟ್ಟಣ ಸೇರಿದಂತೆ ಮಾರ್ಗಮಧ್ಯದ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ರೈಲಿನಲ್ಲಿ ಏನೆಲ್ಲ ಸೌಲಭ್ಯ?
ವಿಶೇಷ ರೈಲಿನಲ್ಲಿ ಒಂದು ಸ್ಲೀಪರ್ ಕ್ಲಾಸ್, 7 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ 2 ಲಗೇಜ್-ಕಮ್-ಬ್ರೇಕ್/ದಿವ್ಯಾಂಗಜನ ಬೋಗಿಗಳು ಇರಲಿವೆ.
ಹಬ್ಬದ ಸಂದರ್ಭದಲ್ಲಿ ಹುಬ್ಬಳ್ಳಿ–ಚಿಕ್ಕಮಗಳೂರು ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಈ ವಿಶೇಷ ರೈಲು ಹೆಚ್ಚುವರಿ ಸಾರಿಗೆ ಸೌಲಭ್ಯ ಒದಗಿಸಲಿದೆ. ಇದರಿಂದ ಹಬ್ಬದ ವೇಳೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.



