ಬೆಂಗಳೂರು: ರಾಜ್ಯದ ಮದ್ಯಪ್ರಿಯರಿಗೆ ಅಬಕಾರಿ ಇಲಾಖೆ ಸಿಹಿ ಸುದ್ದಿ ನೀಡಿದ್ದು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ‘ಆಲ್ಕೋಹಾಲ್ ಇನ್ ಬೆವರೇಜ್’ (AiB) ನೀತಿಯ ಪರಿಣಾಮವಾಗಿ ಪ್ರೀಮಿಯಂ ಬಿಯರ್ ಹಾಗೂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಮೇ 11ರಿಂದ ಜಾರಿಗೆ ಬಂದಿರುವ ಈ ಹೊಸ ನೀತಿಯಡಿ, ಹೆಚ್ಚಿನ ಪ್ರೀಮಿಯಂ ಮದ್ಯ ಬ್ರಾಂಡ್‌ಗಳ ದರ ಕಡಿಮೆಯಾಗಿದ್ದರೆ, ಸಾಮಾನ್ಯವಾಗಿ ಬಳಸುವ ಕಡಿಮೆ ದರದ ಮದ್ಯಗಳ ಬೆಲೆಯಲ್ಲಿ ಏರಿಕೆ ದಾಖಲಾಗಿದೆ.
ಹೊಸ ನಿಯಮದ ಪ್ರಕಾರ, ಶೇ.5ರಷ್ಟು ಆಲ್ಕೋಹಾಲ್ ಹೊಂದಿರುವ ಮೈಲ್ಡ್ ಹಾಗೂ ಲಾಗರ್ ಬಿಯರ್‌ಗಳ ಬೆಲೆ ಶೇ.20ರಿಂದ 25ರವರೆಗೆ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ಕಿಂಗ್‌ಫಿಶರ್ ಪ್ರೀಮಿಯಂ ಮತ್ತು ಅಲ್ಟ್ರಾ 650 ಎಂಎಲ್ ಬಾಟಲಿಗಳ ಬೆಲೆಯಲ್ಲಿ ಸುಮಾರು 75 ರೂ. ಇಳಿಕೆಯಾಗಿದ್ದು, ಹೈನೆಕೆನ್ ಬಿಯರ್ ಮೇಲೆ 70 ರೂ., ಯುಬಿ ಎಕ್ಸ್‌ಪೋರ್ಟ್ ಮೇಲೆ 25 ರೂ. ಹಾಗೂ ಬಡ್‌ವೈಸರ್ ಪ್ರೀಮಿಯಂ ಮೇಲೆ 20 ರೂ.ವರೆಗೆ ಕಡಿತವಾಗಿದೆ.
ಬಿಯರ್ ಮಾತ್ರವಲ್ಲದೆ, ವಿದೇಶಿ ಬ್ರಾಂಡ್‌ಗಳ ಸ್ಕಾಚ್ ವಿಸ್ಕಿಗಳ ದರದಲ್ಲಿಯೂ ಶೇ.20ರಷ್ಟು ಇಳಿಕೆ ಕಂಡುಬಂದಿದೆ. ಬ್ಲ್ಯಾಕ್ ಲೇಬಲ್ ಮತ್ತು ಶಿವಾಸ್ ರೀಗಲ್ 750 ಎಂಎಲ್ ಬಾಟಲಿಗಳ ಬೆಲೆ 5,190 ರೂ.ಗಳಿಂದ 4,100 ರೂ.ಗೆ ಇಳಿದಿರುವುದು ಪ್ರೀಮಿಯಂ ಮದ್ಯ ಬಳಕೆದಾರರಿಗೆ ಸಂತಸ ತಂದಿದೆ.
ಕರ್ನಾಟಕವು ದೇಶದಲ್ಲೇ ಮೊದಲ ಬಾರಿಗೆ ‘ಆಲ್ಕೋಹಾಲ್ ಇನ್ ಬೆವರೇಜ್’ ಆಧಾರಿತ ತೆರಿಗೆ ನೀತಿಯನ್ನು ಜಾರಿಗೊಳಿಸಿರುವ ರಾಜ್ಯವಾಗಿದೆ. ಈ ಹಿಂದೆ ಜಾರಿಯಲ್ಲಿದ್ದ 16 ತೆರಿಗೆ ಸ್ಲ್ಯಾಬ್‌ಗಳನ್ನು ಇದೀಗ 8ಕ್ಕೆ ಇಳಿಸಲಾಗಿದ್ದು, ಸುಮಾರು ಆರು ದಶಕಗಳ ಹಳೆಯ ತೆರಿಗೆ ವ್ಯವಸ್ಥೆಗೆ ತೆರೆ ಎಳೆಯಲಾಗಿದೆ.



