ವಿಜಯಪುರ;- ರಾಜ್ಯದ ನೇಕಾರರಿಗೆ 250 ಯುನಿಟ್ ಉಚಿತ ವಿದ್ಯುತ್ ನೀಡುವ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ವಿಜಯಪುರದಲ್ಲಿ ಮಾತನಾಡಿದ ಸಕ್ಕರೆ, ಜವಳಿ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ, ನಮ್ಮ ಪಕ್ಷ ಚುನಾವಣೆ ಸಂದರ್ಭದಲ್ಲಿ ನೇಕಾರರಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿತ್ತು.
ಈ ಘೋಷಣೆಯನ್ನು ಅನುಷ್ಠಾನಗೊಳಿಸಲು ಶುಕ್ರವಾರ ಸರ್ಕಾರ ಆದೇಶ ಹೊರಡಿಸಿದೆ. ಇದು ನೇಕಾರರಿಗೆ ದಸರಾ ಹಾಗೂ ದೀಪಾವಳಿಯ ಬಂಪರ್ ಕೊಡುಗೆಯಾಗಿದೆ ಎಂದು ಹೇಳಿದರು.
0ದಿಂದ 10 ಎಚ್‌ಪಿವರೆಗಿನ 250 ಯುನಿಟ್ ವರೆಗೆ ರಾಜ್ಯದ ನೇಕಾರರಿಗೆ ಉಚಿತ ವಿದ್ಯುತ್ ನೀಡಲಾಗುವುದು. ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. 35ರಿಂದ 40 ಸಾವಿರ ನೇಕಾರರ ಕುಟುಂಬಗಳಿಗೆ ಈ ಯೋಜನೆಯಿಂದ ಲಾಭವಾಗಲಿದೆ. ₹129ರಿಂದ ₹149 ಕೋಟಿವರೆಗೆ ಈ ಯೋಜನೆ ಅನುಷ್ಠಾನಕ್ಕೆ ವೆಚ್ಚವಾಗಲಿದೆ ಎಂದು ಹೇಳಿದರು.
ದೊಡ್ಡ ನೇಕಾರರಿಗೂ 500 ಯುನಿಟ್ ವರೆಗೆ ₹1.25 ನಂತೆ ರಿಯಾಯ್ತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ 1ರಿಂದ 10ರಷ್ಟು ಎಚ್‌ಪಿ ಹೊಂದಿದ ನೇಕಾರರು ಶೇ.80ರಷ್ಟು ಇದ್ದಾರೆ. ಶೇ.20ರಷ್ಟು ದೊಡ್ಡ ನೇಕಾರರಿದ್ದಾರೆ. ಶೇ. 80ರಷ್ಟು ನೇಕಾರರಿಗೆ ಉಚಿತ ವಿದ್ಯುತ್ ಪ್ರಯೋಜನ ದೊರೆಯಲಿದೆ ಎಂದು ಹೇಳಿದರು.